ಬಂಜಾರರನ್ನು ಬಲಗೈ ದಲಿತರೆಂದು ಬಿಂಬಿಸುತ್ತಾ ಗೊಂದಲವನ್ನುಂಟು ಮಾಡಿ ಹೊಲಯರ (ಚಲವಾದೇರ) ಮತ್ತು ಮಾದಿಗರ ನಡುವೆ ಮನಸ್ತಾಪವನ್ನುಂಟು ಮಾಡುತ್ತಿರುವ ಮಾಧ್ಯಮಗಳು ಹಾಗೂ ಕೆಲ ಪ್ರಭಾವಿಗಳು!

ಬಂಜಾರರನ್ನು ಬಲಗೈ ದಲಿತರೆಂದು ಬಿಂಬಿಸುತ್ತಾ ಗೊಂದಲವನ್ನುಂಟು ಮಾಡಿ ಹೊಲಯರ ಮತ್ತು ಮಾದಿಗರ ನಡುವೆ ಮನಸ್ತಾಪವನ್ನುಂಟು ಮಾಡುತ್ತಿರುವ ಕರ್ನಾಟಕದ ಸುದ್ದಿ ಮಾಧ್ಯಮಗಳು ಹಾಗೂ ಸಮಾಜಿಕ ಜಾಲತಾಣದ ಕೆಲ ಪ್ರಭಾವಿಗಳು!

BTVಯ ರಾಧಾ ಹಿರೇಗೌಡರ್‌ ಅವರು ಒಳಮೀಸಲಾತಿಯ ವಿಚಾರವಾಗಿ ಡಿಬೇಟ್‌ ಪ್ರೋಗ್ರಾಮ್‌ ನಡೆಸುತ್ತಾ ಹೊಲಯ ಸಂಬಂಧಿತ ಜಾತಿಗಳನ್ನು ಹಾಗೂ ಬಂಜಾರರನ್ನು ಒಟ್ಟಿಗೆ "ಬಲಗೈ" ಎಂದು ಕರೆದು, ಮಾದಿಗರು ಹಾಗೂ ಸಂಬಂಧಿತ ಜಾತಿಗಳನ್ನು "ಎಡಗೈ" ಎಂದು ಕರೆದು ಗೊಂದಲವನ್ನು ಸೃಷ್ಟಿಸಿದ್ದರು.

ಇದೇ ಛಾಳಿ ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಕೆಲವರು ಹೀಗೆ ಬಲಗೈ ಎಂದರೆ ಹೊಲಯರು, ಹೊಲಯ ಸಂಬಂಧಿತ ಜಾತಿಗಳು ಮತ್ತು ಬಂಜಾರರು ಎಂಬಂತೆಯೆ Congress ಹಾಗೂ BJP ಅಭ್ಯರ್ಥಿಗಳ ಬಿಡುಗಡೆಯಾದ ಪಟ್ಟಿಯನ್ನು ಹಂಚಿ ಅದರೊಡನೆ ಬಲಗೈ ಸಮುದಾಯಗಳಿಗೆ ಸಿಂಹಪಾಲು ಎಂಬಂತೆ ಬರೆದು ಹಂಚುತ್ತಿದ್ದರು! ಆದರೆ ವಾಸ್ತವದಲ್ಲಿ ನಿಜಕ್ಕೂ ಸೀಟ್/ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಸಿಂಹಪಾಲು ಪಡೆದಿದ್ದದ್ದು ಲಂಬಾಣಿ ಅಭ್ಯರ್ಥಿಗಳು. ಇನ್ನೂ ಇವರು ಹೊಲಯರನ್ನು ಹಾಗೂ ಬಂಜಾರರನ್ನು ಸೇರಿಸಿ ಕೊಡುತ್ತಿದ್ದ ಸೀಟ್‌/ಟಿಕೆಟ್‌ಗಳ ಲೆಕ್ಕವಂತು ಎಡಗೂ ಸಮುದಾಯವಾದ ಮಾದಿಗರನ್ನು ತಮಗಾದ ಅನ್ಯಾಯಕ್ಕೆ ಕೆರಳಿಸುವಂತಿತ್ತು ಎಂಬುದೇನು ಸುಳ್ಳಲ್ಲ. ಇತ್ತೀಚೆಗೆ ಹೊಲಯ ಮಾದಿಗರ ವೈಮನಸ್ಯವೂ ಸ್ವಲ್ಪ ತಣ್ಣಗಾಗಿದ್ದರೂ ಸಹ ಆಗಾಗೆ ಅದು ವ್ಯಕ್ತವಾಗುವುದೇನೂ ಸುಳ್ಳಲ್ಲ. ಅದರ ಮೇಲೆ ಇಂಥಹ ಯಡವಟ್ಟು ಸುದ್ದಿಗಳು ಈ ಅವಳಿ ಸಮುದಾಯಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸುವ ಕುತಂತ್ರವಲ್ಲದೆ ಮತ್ತೇನು?


ಜನಸಂಖ್ಯೆಗೆ ಅನುಗುಣವಾಗಿ ಹೊಲಯರಿಗೆ ಹಾಗೂ ಹೊಲಯ ಸಂಬಂಧಿತ ಜಾತಿಗಳಿಗೆ 15 ರಿಂದ 16, ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ  16 ರಿಂದ 17, ಲಂಬಾಣಿ ಹಾಗೂ ಭೋವಿಗಳಿಗೆ  ತಲಾ 2 ರಿಂದ 3  ಹಾಗೂ ಉಳಿದ ಸಮುದಾಯಗಳಿಗೆ 1 ರಿಂದ 2 ಸೀಟ್‌/ಟಿಕೆಟ್‌ಗಳ ಹಂಚಿಕೆಯಾಗಬೇಕು, ಆದರೆ ಇಲ್ಲಿ ಆಗುವುದೇ ಬೇರೆ!

ಸದ್ಯಕ್ಕೆ ನಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದ ಅವರ್ಣೀಯ ವರ್ಗಗಳೆಂದೇ ಪರಿಗಣಿಸಲ್ಪಟ್ಟಿದ್ದ ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿ ಅವರ್ಣೀಯರಲ್ಲದ ಸ್ಪಶ್ಯ ಸಮುದಾಯಗಳಾದ ಬಂಜಾರ (ಲಂಬಾಣಿ) ಹಾಗೂ ಭೋವಿಗಳನ್ನು ಬಹಳ ಹಿಂದೆಯೇ ರಾಜಕೀಯ ಹಿತಾಸಕ್ತಿಗಳಿಂದ ಸೇರಿಸಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ನೈಜ್ಯ ಅವರ್ಣೀಯರ ಒಗ್ಗಟಿನ ಕೊರತೆಯಿಂದಲೂ ಹಾಗೂ ಅದೇ ಅವರ್ಣೀಯ ರಾಜಕಾರಣಿಗಳ ರಾಜಕೀಯ ಸ್ವಹಿತಾಸಕ್ತಿಯಿಂದಲೂ ಅಂದು ಇದನ್ನು ವಿರೋಧಿಸುವವರು ಯಾರೂ ಇರಲಿಲ್ಲ. ಆದರೆ ಇಂದು ಅದೇ ಒಂದು ದೊಡ್ಡ ಸಮಸ್ಯೆಯಾಗಿ SC ವರ್ಗದೊಳಗಿನ ದೊಡ್ಡ ಸಂಖ್ಯೆಯ ಹೊಲಯ (ಚಲವಾದಿ) ಹಾಗೂ ಮಾದಿಗ ಸಮುದಾಯಗಳಿಗೆ ಪರಿಣಮಿಸಿರುವುದಂತು ಸತ್ಯ.

BJP ಹಾಗೂ Congress ಅಂಥಹ ದೊಡ್ಡ ಪಕ್ಷಗಳು ಇಂದು ಇದೇ ಸಮಸ್ಯೆಯನ್ನ ಅವರ್ಣೀಯ ಜನಸಮುದಾಯಗಳ ಹಿತಾಸಕ್ತಿಗೆ ವಿರುದ್ದವಾಗಿ ಹಾಗೂ ಅವರ್ಣೀಯರ ಅಭಿವೃದ್ದಿ ಬೆಳವಣಿಗೆಗಳ ವಿರುದ್ದವಾಗಿ ಬಳಸಿಕೊಳ್ಳಲು ನಿಂತಿರುವುದು ದೊಡ್ಡ ದುರಂತವೇ ಸರಿ. 

ಅದರಲ್ಲೂ ಇಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಕರ್ನಾಟಕದ ಒಟ್ಟು 224 ಕ್ಷೇತ್ರಗಳ ಪೈಕಿ ಒಟ್ಟು 36  ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರಗಳಿದ್ದು ಇವುಗಳಲ್ಲಿ ಎಷ್ಟು ಕ್ಷೇತ್ರದಲ್ಲಿ  68 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿರುವ ಅವರ್ಣೀಯರಿಗೆ, ಎಂದರೆ ಹೊಲಯರ (33 ಲಕ್ಷ) ಹಾಗೂ ಮಾದಿಗರ (35 ಲಕ್ಷ) ಸಂಬಂಧಿ ಜಾತಿಯ ಅಭ್ಯರ್ಥಿಗಳಿಗೆ ಹಾಗೂ, ಸುಮಾರು 20 ಲಕ್ಷದಷ್ಟು ಇರುವ ಸ್ಪೃಶ್ಯ ಸಮುದಾಯಗಳಾದ ಬಂಜಾರ/ಲಂಬಾಣಿ (11 ಲಕ್ಷ) ಹಾಗೂ ಭೋವಿ (9 ಲಕ್ಷ)  ಸಮುದಾಯದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ ಎನ್ನುಷ್ಟರಲ್ಲೇ BJP ಪಕ್ಷವು 36 SC ಮೀಸಲು ಕ್ಷೇತ್ರಗಳಲ್ಲಿ 29 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ನಮ್ಮ ಅನುಮಾನವನ್ನು, ತಮ್ಮ ಅವರ್ಣೀಯ ದಲಿತ ವಿರೋಧಿತನವನ್ನು ಬಯಲು ಮಾಡಿಕೊಂಡಿದೆ.

ಒಟ್ಟು 36 ಕ್ಷೇತ್ರಗಳ ಪೈಕಿ 29 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ ವರ್ಗದಲ್ಲಿಯೇ ಅತ್ಯಂತ ಅಲ್ಪಸಂಖ್ಯಾತ ಜನಸಮುದಾಯವಾದ ಲಂಬಾಣಿ (9) ಹಾಗೂ ಭೋವಿ (5) ಸಮಾಜದ ಒಟ್ಟು 15 ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದ್ದು ಬಹುಸಂಖ್ಯಾತರಾದ ಹೊಲಯರು (6) ಮಾದಿಗರು (8) ಹಾಗು ಸಂಬಂಧಿತ ಸಮುದಾಯದ ಒಟ್ಟು 14 ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದೆ! ಇದು ಜನಪ್ರತಿನಿಧಿತ್ವ ಅನ್ಯಾಯವಲ್ಲದೇ ಮತ್ತಿನ್ನೇನು? 68 ಲಕ್ಷ ಜನಸಂಖ್ಯೆಯ ಹೊಲಯ ಮಾದಿಗರ ರಾಜಕೀಯ ಪ್ರತಿನಿಧಿತ್ವ 20 ಲಕ್ಷದಷ್ಟಿರುವ ಲಂಬಾಣಿ ಭೋವಿಗಳ ಪ್ರತಿನಿಧಿತ್ವಕ್ಕಿಂತಲೂ ಕಡಿಮೆಯೆ? ಈಗಾಗಲೇ ಕನ್ನಡ ಪರರು ಸಹ ಇದು BJPಯ ಕನ್ನಡ ವಿರೋಧಿತನ, ಕನ್ನಡ ಪರಿಶಿಷ್ಟರ ರಾಜಕೀಯ ಮೀಸಲಾತಿಯನ್ನು ಅಲ್ಪಸಂಖ್ಯಾತ ಕನ್ನಡೇತರರನ್ನು ಓಲೈಸಲು ಬಳಸಿಕೊಂಡು ಕನ್ನಡ ವಿರೋಧಿತನವನ್ನು ತೋರುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅದರಲ್ಲೂ ದೊಡ್ಡ ಹೊಲಗೇರಿ ಎಂದು ಕರೆಸಿಕೊಳ್ಳುವ ಮಂಡ್ಯದ ಮಳವಳ್ಳಿಯಲ್ಲಿ BJP ಅಭ್ಯರ್ಥಿ ಭೋವಿ ಸಮಾಜದವರು. ಹೊಲಯ ಮಾದಿಗರೇ ಹೆಚ್ಚಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ BJP ಅಭ್ಯರ್ಥಿ ಬಂಜಾರ ಸಮುದಾಯದವರು! ಇನ್ನೂ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿರುವ ಬಂಜಾರ ಭೋವಿ ಮತದಾರರ ಎದುರು ಲಕ್ಷಗಳ ಸಂಖ್ಯೆಯಲ್ಲಿರುವ ಹೊಲಯ ಮಾದಿಗ ಮತದಾರರನ್ನು ಕಡೆಗಣಿಸಿರುವುದಂತು ಸ್ಪಷ್ಟವಾಗಿ ತಿಳಿಯುತ್ತಿದೆ.

ಇನ್ನೊಂದು ಕಡೆ Congress ಸಹ ಮೀಸಲು ಕ್ಷೇತ್ರದ 22 ಅಭ್ಯರ್ಥಿ ಪಟ್ಟಿಯನ್ನು ಘೋಷಣೆ ಮಾಡಿದ್ದು ಅದು ಸ್ವತಃ ಹೊಲಯ ಮಾದಿಗರ ನಡುವೆಯೇ ಮನಸ್ತಾಪವನ್ನುಂಟು ಮಾಡುವಂತಿದೆ. ಹನ್ನೆರೆಡು ಹೊಲಯ ಸಂಬಂಧಿತ ಜಾತಿಯ ಅಭ್ಯರ್ಥಿಗಳಿಗೆ, ನಾಲ್ವರು ಮಾದಿಗ ಸಂಬಂಧಿತ ಜಾತಿಯ ಅಭ್ಯರ್ಥಿಗಳಿಗೆ, ನಾಲ್ವರು ಲಂಬಾಣಿ ಅಭ್ಯರ್ಥಿಗಳಿಗೆ, ಹಾಗೂ‌ ಇಬ್ಬರು ಭೋವಿ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ಮಾದಿಗರು ಹೆಚ್ಚಿರುವಂತಹ ಕಲ್ಯಾಣ ಕರ್ನಾಟಕ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹ ಹೊಲಯ ಸಂಬಂಧಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಇನ್ನೂ ಹಲವು ಕಡೆ ಮಾದಿಗರು ಹೆಚ್ಚಿರುವ ಕ್ಷೇತ್ರಗಳಲ್ಲಿ ಭೋವಿ ಅಭ್ಯರ್ಥಿಗಳಿಗೆ ಹಾಗೂ ಹೊಲಯರು ಹೆಚ್ಚಿರುವ ಕಡೆ ಲಂಬಾಣಿ ಅಭ್ಯರ್ಥಿಗಳಿಗೂ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ ವಿಚಾರದಲ್ಲಿ ಮಾತ್ರ ಇದು ಅವರ್ಣೀಯ v/s ಸ್ಪೃಶ್ಯ ತಿಕ್ಕಾಟವಾಗದೇ ಹೊಲಯರು ಮತ್ತು ಮಾದಿಗರೇ ಕಿತ್ತಾಡುವಂತಾಗಿದೆ. 

ಹೊಲಯ ಮಾದಿಗರು ಸೂಕ್ಷ್ಮಮತಿಗಳಾಗಿ ಯೋಚಿಸಿ ಈ ಬಾರಿ ಮತ ಚಲಾಯಿಸಬೇಕಿದೆ. ಸದ್ಯದ ಪರಿಸ್ಥಿತಿಗೆ ಎಡಗೈ ಬಲಗೈ ಜಗಳಗಳನ್ನು ಪಕ್ಕಕ್ಕೆ ಸರಿಸಿ, ಎರಡೂ ಕೈಗಳನ್ನು ಜೋಡಿಸಿ ನಿರ್ಧರಿಸಬೇಕು. ಅದರಲ್ಲೂ ಇದೇ ಟಿಕೆಟ್‌ ಹಂಚಿಕೆ ವಿಚಾರವಾಗಿ ಹೊಲಯರು ಮಾದಿಗರೊಡನೆಯ ವೈಮನಸ್ಯದ ಕಾರಣಕ್ಕೆ ಲಂಬಾಣಿಗಳನ್ನು ಗೆಲ್ಲಿಸುವುದು ಹಾಗೂ ಮಾದಿಗರು ಹೊಲಯರೊಡನೆಯ ವೈಮನಸ್ಯದ ಕಾರಣಕ್ಕೆ ತಾವು ಹೆಚ್ಚಿರುವೆಡೆ ಹೊಲಯರನ್ನು ಸೋಲಿಸಿ ಮೂರನೇಯವರಿಗೆ ಲಾಭ ಮಾಡಿಕೊಡಬಾರದು. ಸದ್ಯಕ್ಕೆ ಈ ವಿಷಯ ಕನ್ನಡನಾಡಿನ ಅಸ್ಮಿತೆಯ ವಿಚಾರವೂ ಆಗಿದೆ. ಕನ್ನಡೇತರ ಸ್ಪೃಶ್ಯ ಪರಿಶಿಷ್ಟರು ನಮ್ಮ ನಾಡವನ್ನು ಆವರಿಸಿಕೊಂಡು ಕಬಳಿಸಿಕೊಳ್ಳುವ ದುರಂತವನ್ನು ಒಟ್ಟಿಗೆ ತಡೆಯಬೇಕಿದೆ. ಹೊಲಯರು ಮಾದಿಗರೂ ವೈಮನಸ್ಯಗಳನ್ನು ಮರೆತು ಪರಸ್ಪರ ಒಳಿತಿಗೆ ಕೆಲಸ ಮಾಡಲೇ ಬೇಕಾದ "ಮಾಡು ಇಲ್ಲವೇ ಮಡಿ" ಪರಿಸ್ಥಿತಿಗೆ ತಲುಪಿದ್ದೇವೆ ಎಂಬ ಅರಿವನ್ನು ಮೂಡಿಸಿಕೊಳ್ಳಬೇಕು. ಬಲಿಷ್ಠ ನಾಯಕರನ್ನು ಹುಟ್ಟಿಹಾಕಿ ರಾಜಕೀಯದ ಮೇಲೆ ನಮ್ಮದೇ ಆದಂತಹ ವರ್ಚಸ್ಸು ಹಿಡಿತಗಳನ್ನು ಸಂಪಾದಿಸುವವರೆಗೂ ನ್ಯಾಯವಾಗಿ ನಮಗೆ ಸಲ್ಲಬೇಕಾದದೇನನ್ನೂ ಸಹ ನಾವು ಧಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ನಡುವಿನ ಬಿರುಕು ಇದನ್ನು ಸಾಧ್ಯವಾಗಿಸುತ್ತಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಒಂದುಗೂಡಿ, ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಪಕ್ಷ ಮಾಡಿರುವ ಯಡವಟ್ಟನ್ನೂ ಮೀರಿ ಒಗ್ಗಟ್ಟು ತೋರಿ, ಒಬ್ಬರಿಗೊಬ್ಬರು ಆಗುವಂತೆ ನಡೆದುಕೊಂಡು ಮುಂದೆ ಸ್ವತಃ ನಮಗೆ ನಾವೇ ನ್ಯಾಯವನ್ನು ದೊರಕಿಸಿಕೊಳ್ಳುವ ಸ್ಥಾನವನ್ನು ಗಳಿಸಬೇಕಿದೆ. ಈಗಲೂ ಎಡಗೈ ಬಲಗೈ ಎಂದು ಕುತ್ತಾಡುತ್ತಿದ್ದರೆ ಕಿತ್ತು ತಿನ್ನುವ ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವುಗಳು ಎದುರಿಸಬೇಕಾಗುವುದೋ ಏನೋ! ಹೊಲಯ ಹನುಮ ಮಾದಿಗ ಜಾಂಬವ ಸೇರಿದರಷ್ಟೇ ನಾವು, ನಮ್ಮ ವರ್ಚಸ್ಸು ಸ್ಥಿತಿಗತಿಗಳು ಆಕಾಶಕ್ಕೇರಲು ಸಾಧ್ಯವಿರುವುದು ಎಂಬ ಅರಿವು ನಮ್ಮೊಳಗೆ ಸದಾ ಇರಲಿ.



No comments:

Post a Comment

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...