ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊಲಯ)!!!
![]() |
| ಚಿತ್ರ ಕೃಪೆ : ದಿ ಹಿಂದೂ ದಿನ ಪತ್ರಿಕೆ |
ಇದಕ್ಕೆ ಪೂರಕವಾದ ಒಂದು ಘಟನೆ ಸ್ವತಃ ಶಂಕರರೇ ರಚಿಸಿದ “ಮನಿಶಾ ಪಂಚಕಮ್”ನಲ್ಲಿ ಇದೆ. ಆದರೆ "ಪೊಟ್ಟನ್ ತೆಯ್ಯಂ"ನ ಪ್ರಕಾರ ಇದು ನಡೆದದ್ದು ಕೇರಳದಲ್ಲಿ, ಮನಿಶಾ ಪಂಚಕಮ್‌ನ ಪ್ರಕಾರ ಇದು ನಡೆದದ್ದು ಉತ್ತರ ಭಾರತದ ಗಂಗಾ ನದಿಯ ತಟದಲ್ಲಿ.
ಪೊಟ್ಟನ್ ತೆಯ್ಯಂನ ಕಥೆಯ ಪ್ರಕಾರ, ಶಂಕರಾಚಾರ್ಯರು ತಲಕಾವೇರಿಯತ್ತ ಪಯಣ ಬೆಳೆಸುವಾಗ ಕೋೞತ್ತುನಾಡಿನ ಶಂಕರನಾರಾಯಣ ದೇವಸ್ಥಾನದಲ್ಲಿ ಹಾರವರ ಕೂಡಿಸಿ ತಮ್ಮ ಅದ್ವೈತ ಸಿದ್ದಾಂತದ ಬಗ್ಗೆ ವಾದ ಭೋದನೆ ಕೊಡುತ್ತಿರುತ್ತಾರೆ. ದೇವಸ್ಥಾನದ ಹಿಂದಿನ ಗುಡ್ಡದ ಮೇಲೆ ನಿಂತು ಕೇಳಿಸಿಕೊಳ್ಳುತ್ತಿದ್ದ ಅಲಂಕಾರನೆಂಬ ಹೊಲಯರ ಹುಡುಗ ಶಂಕರರ ಅದ್ವೈತ ಸಿದ್ದಾಂತದಲ್ಲಿ ಲೋಪದೋಷಗಳನ್ನು ಗುರುತಿಸುತ್ತಾನೆ. ಮಾರನೆಯ ದಿನ ಭೋದನೆ ಮುಗಿಸಿ ತಲಕಾವೇರಿಯತ್ತ ತಮ್ಮ ಪಯಣ ಮುಂದುವರೆಸಿದ ಶಂಕರರಿಗೆ ಅಲಂಕಾರನು ಕಾಲುದಾರಿಯಲ್ಲಿ ಎದುರಾಗಿ ಸಿಗುತ್ತಾನೆ. ದ್ವಿಜರ ಎದುರುಬದುರಾಗಿ ದ್ವಿಜರಲ್ಲದವರು ಸಿಕ್ಕರೆ ಅದು ಅಗೌರವ ಎಂದು ಪರಿಗಣಿಸಲಾಗುತ್ತಿದ್ದ ಆ ಕಾಲಮಾನದಲ್ಲಿ, ತಮ್ಮ ದಾರಿಗೆ ಎದುರಾಗಿ ಹೊಲಯನೊಬ್ಬ ಬಂದಾಗ ಕಸಿವಿಸಿಗೊಳ್ಳುತ್ತಾರೆ ಶಂಕರರು. “ದಾರಿ ಬಿಡು” ಎಂದು ಅಲಂಕಾರನ್ನು ಕೇಳುತ್ತಾರೆ. ಆಗ ನೇರವಾಗಿ ಮಾತಿಗೆರಗಿದ ಅಲಂಕಾರನು ನೆನ್ನೆ ಅದ್ವೈತ ಸಿದ್ದಾಂತದ ಬಗ್ಗೆ ನಿಮ್ಮ ವಾದ ಭೋದನೆಗಳನ್ನು ಆಲಿಸಿದೆ, ಅದರಲ್ಲಿ ಮನುಷ್ಯ ಜೀವದ ತಾರತಮ್ಯದ ಲೋಪದೋಷಗಳುಂಟು ಎಂದು ಹೇಳುತ್ತಾನೆ.
“ಹೊಳೆ ದಾಟಲು ನಾನು ಮಾಡಿದ ದೋಣಿಯನ್ನು ಬಳಸಿರುವೆ, ದಾಟುವಾಗ ಹೊಳೆಯ ನೀರನ್ನು ಕಂಡಿರುವೆ,
ನಾನು ಬೆಳೆಸಿದ ತೆಂಗಿನಮರದಿಂದ ಎಳನೀರು ಕುಡಿದು ಕಾಯನ್ನು ತಿಂದಿರುವೆ, ಆ ನೀರು ನಿನ್ನ ಬಾಯಾರಿಕೆಯನ್ನು ತಣಿಸಿದೆ,
ನಾನು ಬೆಳೆದ ಬಾಳೆ ಮರದ ಬಾಳೆಹಣ್ಣುಗಳು ನೀನು ಮಾಡುವ ಪೂಜೆಯಲ್ಲಿ ಬಳಕೆಯಾಗುತ್ತದೆ,
ನನ್ನ ಹೊಲೆಮನೆಯ ಅಂಗಳದಲ್ಲಿ ಬೆಳೆದ ಹೂಗಳು ನಿನ್ನ ದೇವರ ಮುಡಿಗೇರುತ್ತದೆ”
(ಪೊಟ್ಟನ್ ತೆಯ್ಯಂ ಆಚರಣೆಯಲ್ಲಿ ದೈವದ ಬಾಯಲ್ಲಿ ಬರುವ ಮಲಯಾಳದ ಸಾಲುಗಳ ಕನ್ನಡ ಅವತರಣಿಕೆ)
![]() |
| ಪೊಟ್ಟನ್ ತೆಯ್ಯಂ ಆಚರಣೆ |
ಹೀಗೆ ವಾದ ಮುಂದುವರೆಯುತ್ತದೆ, ಶಂಕರರು ಮೂಕವಿಸ್ಮಿತರಾಗಿ ನಿಲ್ಲುತ್ತಾರೆ. ಕೊನೆಯಲ್ಲಿ “ನನಗೆ ಗಾಯವಾದರೂ ರಕ್ತವೇ ಬರುತ್ತದೆ, ನಿನಗೆ ಗಾಯವಾದರೂ ರಕ್ತವೇ ಬರುತ್ತದೆ, ಹೀಗಿರುವಾಗ ಈ ಮೇಲುಜಾತಿ ಕೀಳುಜಾತಿ ಕುಲ ಮತಗಳ ಹಗೆ ಏಕೆ? ಮ್ಲೆಚ್ಛರೂ, ಕಿರಾತರೂ, ಶ್ವಪಚರಲ್ಲೂ ಪರಮಾತ್ಮನಿಲ್ಲವೆ? ಪರಮಾತ್ಮನೆದುರು ನಾವೆಲ್ಲರೂ ಒಂದೇ ಅಲ್ಲವೇ?” ಎಂದು ಅಲಂಕಾರನು ತನ್ನ ಮಾತು ಮುಗಿಸಿ ಕಾಲುದಾರಿಯ ನಡುವೆ ಒಂದು ಕೋಲನ್ನಿಟ್ಟು ಎರಡು ಭಾಗ ಮಾಡಿ (ಈಗಿನ ರೋಡ್ ಡಿವೈಡರ್‌ನಂತೆ) ಅತ್ತ ನಿನ್ನ ದಾರಿಯಲ್ಲಿ ನೀನು ನಡೆ ಎಂದು ಹೇಳಿ ಬೀಳ್ಕೊಡುಗೆ ಕೊಡುತ್ತಾರೆ.
ಇದೇ ಘಟನೆ ಶಂಕರರ ಅದ್ವೈತ ಸಿದ್ದಾಂತವು ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಸ್ಪೂರ್ತಿ ನೀಡಿತು ಎನ್ನಬಹುದು. ತಮ್ಮ “ಮನಿಶಾ ಪಂಚಕಮ್” ಸ್ತೋತ್ರ ರಚನೆಯಲ್ಲಿಯೂ ಸಹ ಆ ಹೊಲಯನನ್ನು ನೆನದು, ಆತನನ್ನು ಸಾಕ್ಷಾತ್ ಶಿವನೇ ಎಂದು ಪರಿಭಾವಿಸಿ ಈ ಘಟನೆಗೆ ಹೊಸ ರೂಪ ಕೊಟ್ಟು ದಾಖಲಿಸುತ್ತಾರೆ. ಮನಿಶಾ ಪಂಚಕಮ್‌ನ ಪ್ರಕಾರ ಘಟನೆಯ ವಿವರಣೆ ಹೀಗಿದೆ.
ಗಂಗೆಯಲ್ಲಿ ಮಿಂದೆದ್ದ ಶಂಕಕರರು ದಡ ಮೇಲೆ ನಡೆದು ಬರುವಾಗ ಚಾಂಡಾಲನೊಬ್ಬ ತನ್ನ ನಾಲ್ಕು ನಾಯಿಗಳೊಂದಿಗೆ ಎದುರಾಗುತ್ತಾನೆ. (ಬಹುಶಃ ನಾಲ್ಕು ನಾಯಿಗಳೊಡನೆ ಬರುವ ಚಾಂಡಾಲನ ವರ್ಣನೆ ದತ್ತಾತ್ರೇಯರನ್ನು ಹೋಲಿಸಿ ಬರೆದಿರುವಂತಿದೆ). ಆ ಚಾಂಡಾಲನನ್ನು ಕಂಡ ಶಂಕರರು “ಅತ್ತ ಸರಿ, ನನಗೆ ದಾರಿ ಬಿಡು” ಎನ್ನುತ್ತಾರೆ. ಅದಕ್ಕೆ ಆ ಚಾಂಡಾಲನು “ಯಾರನ್ನು ಅತ್ತ ಸರಿಯಲು ಹೇಳುತ್ತಿರುವೆ? ನನ್ನ ದೇಹಕ್ಕಾ? ಅಥವಾ ನನ್ನ ಆತ್ಮಕ್ಕಾ? ನನ್ನನ್ನು ತಾಗಿಸಿಕೊಂಡ ಮಾತ್ರಕ್ಕೆ ನೀನು ಅಶುದ್ಧನಾಗಿಬಿಡುವೆಯಾ? ಆತ್ಮದಲ್ಲಾದ್ರೂ, ಕಾಯದಲ್ಲಾದರೂ ಹೇಗೆ ಬ್ರಾಹ್ಮಣ ಅಥವಾ ಚಾಂಡಾಲ ಎಂದು ಬೇಧಿಸುವೆ? ನಮ್ಮಿಬ್ಬರ ಕಾಯವು ಅದೇ ಮಣ್ಣು ನೀರು ಬೆಂಕಿ ಗಾಳಿ ಮತ್ತು ಜಗತ್ತಿನ ಅಂಶಗಳಿಂದಾಗಿವೆ. ನನ್ನೊಳಗಿನ ಹಾಗೂ ನಿನ್ನೊಳಗಿನ ಆತ್ಮ ಚೈತನ್ಯವೂ, ಕಾಯದ ಅಂಶಗಳೂ ಒಂದೇ ಆಗಿರುವಾಗ ನನ್ನನ್ನು ಅತ್ತ ಸರಿಯಲು ಹೇಳಿ ಮುಂದೆ ಸಾಗುವ ಅವಶ್ಯಕತೆಯಾದರೂ ಏನು? ಎನ್ನುತ್ತಾನೆ.
ಈ ಪ್ರತಿಕ್ರಿಯೆಯಿಂದ ಶಂಕರರು ಆಶ್ಚರ್ಯಚಕಿತರಾದರು ಮತ್ತು ಬ್ರಹ್ಮನನ್ನು ಏಕೈಕ ವಾಸ್ತವವೆಂದು ನೋಡುವ ಮತ್ತು ಆತ್ಮನನ್ನು ಎಲ್ಲದರಲ್ಲೂ ಒಂದೇ ಎಂದು ಗುರುತಿಸುವ ಯಾರಾದರೂ ಗೌರವಕ್ಕೆ ಅರ್ಹರು ಎನ್ನುತ್ತಾರೆ.
ಸಾಕ್ಷಾತ್ ಶಿವನೇ ತನ್ನ ಅದ್ವೈತ ಸಿದ್ದಾಂತವನ್ನು ತನಗೆ ತಿಳಿಸಿಕೊಡುತ್ತಿದ್ದಾನೆಂದು ಭಾವಿಸಿದ ಶಂಕರರು ತಮ್ಮ ಅದ್ವೈತ ಸಿದ್ದಾಂತವು ಲೋಪದೋಷಗಳನ್ನು ಮೀರು ಅಂದು ಪರಿಪೂರ್ಣತೆಯನ್ನು ಕಂಡುಕೊಂಡಿತು ಎಂದು ಭಾವಿಸಿ “ಮನಿಶಾ ಪಂಚಕಮ್” ರಚಿಸಿದರು ಎನ್ನಲಾಗುತ್ತದೆ.




No comments:
Post a Comment