ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು

ನಾವು ಆರಂಬಗಾರರು. ಆದಿಕನ್ನಡಿಗರು. ಆದಿದ್ರಾವಿಡರು. ಈ ನಾಡು ಕಟ್ಟಿದವರು. ಈ ನುಡಿಯ ಕಟ್ಟಿದವರು. ಬಿದ್ದು ಮಣ್ಣಾದ, ಕನ್ನಡದ ಆರಂಬಗಾರರು ಕಟ್ಟಿದ ಮಹಾರಸೊತ್ತಿಗೆಗಳ ವಾರಸುದಾರರು. ಯಾರ ದಂಡಿಗೂ, ದಾಳಿಗೂ, ದೌರ್ಜನ್ಯಗಳಿಗೂ ಜಗ್ಗದೇ ನಿಂತು ನಾಡನ್ನುಳಿಸಿದವರು. ನುಡಿಯನ್ನುಳಿಸಿದವರು. ಕನ್ನಡನಾಡಿನ ಹಿತ ಕಾಯುವುದು ನಮ್ಮ ಆದ್ಯತೆಯಾದೆ. ಹೊರನಾಡುಗಳಲ್ಲಿ ನಮ್ಮ ಸಮಾನರಾದವರ ಮೇಲೆ ಆಗುವ ದೌರ್ಜನಗಳನನು ವಿರೋಧಿಸುವ ಬರದಲ್ಲಿ, ಅವರುಗಳಿಗೆ ನೈತಿಕ ಬೆಂಬಲವಾಗಿ ನಿಲ್ಲುವ ಆತುರದಲ್ಲಿ ನಮ್ಮ ನಾಡನ್ನೇ ನಾವು ಹಾಳುಗೆಡವಿಕೊಳ್ಳುವ ದಡ್ಡತನ ತೋರುವುದು ಸರಿಯಲ್ಲ. ಈಗ ನಾವು ಮಾಡುವ ಇಂಥ ದೊಡ್ಡ ತಪ್ಪುಗಳಿಗೆ ಮುಂದೆ ಅಪಾರವಾದ ದಂಡವನ್ನೂ ನಾವೇ ತರಬೇಕಾಬಹುದು!


ಅವರ್ಣೀಯ ವರ್ಗಗಳಿಗೆಂದಿದ್ದ ಪರಿಶಿಷ್ಟ ಜಾತಿಯ ಮೀಸಲಾತಿಯನ್ನ ಈಗಾಗಲೇ ಕನ್ನಡೇತರ ಪರಿಶಿಷ್ಟರು ಹುರಿದು ಮುಕ್ಕುತ್ತಿದ್ದಾರೆ! ಇದರ ಮೇಲೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ನೆಲಹಿಡುಕತನ ತೋರಿದ ಆಳುವ ಸರ್ಕಾರಗಳ ಕೆಟ್ಟನಡೆ ಈಗಾಗಲೇ ಕರ್ನಾಟಕದ ನೆಲವನ್ನು ಹರಿದು ಅದೆಷ್ಟು ಪರಭಾಷಿಕರಿಗೆ ಹಂಚಿದೆಯೋ ತಿಳಿಯದು. ಇನ್ನೂ ಒಳಮೀಸಲಾತಿಗಾಗಿ ಹೋರಾಟಗಳು ಒಂದು ತಾತ್ವಿಕ ಯಶಸ್ಸನ್ನೂ, ಅಂತ್ಯವನ್ನು ಕಂಡಿಲ್ಲ. ಇವೆಲ್ಲವುದರ ನಡುವೆ ಪರರಾಜ್ಯದ ಅವರ್ಣೀಯ ಪರಿಶಿಷ್ಟರನ್ನ ಕರ್ನಾಟಕಕ್ಕೆ ಬಂದು ನೆಲೆಸಿ ಸೇಫ್ ಆಗಿರಿ ಎಂದು ಆಹ್ವಾನಿಸುವುದು ನಮ್ಮ ಕಾಲಮೇಲೆ ನಾವೇ ಚಪ್ಪಡಿಯನ್ನು ಎಳೆದುಕೊಂಡಂತೆ.

ಹೀಗೆ ಕರೆಯುವವರ ಬಾಲಿಶತನಕ್ಕೆ ಮದ್ದೇನು? ಹೇಡಿಗಳಾಗಿ ಓಡಿಬನ್ನಿ ಎಂಬುದಿವರ ಸಂದೇಶವಾ? ಅಥವಾ ಕರ್ನಾಟಕ ಬಿಟ್ಟಿ ಬಿದ್ದಿದೆ, ಬಂದುಬಿಡಿ ಎಂಬುದಾ? ಅಥವಾ ಕರ್ನಾಟಕದಲ್ಲಿ ಜಾತಿ ದೌರ್ಜನ್ಯಗಳೇ ಇಲ್ಲ ಎಂಬುದಾ? ಕರ್ನಾಟಕಕ್ಕೆ ಬೇರೆ ಕಾನೂನು, ಉಳಿದ ಭಾರತಕ್ಕೆ ಬೇರೆ ಕಾನೂನು ಇದೆಯಾ?

ಯಾದಗಿರಿ ಕೊಪ್ಪಳಗಳಲ್ಲಿ ಹತ್ರಾಸ್‌, ಮೊನಿಷ ವಾಲ್ಮೀಕಿ ಅತ್ಯಾಚಾರಗಳಂತಹ ಪ್ರಕರಣಗಳು ಆಗಿವೆ. ಆಗ ಇವರು ಏನು ಹೇಳಿರಬಹುದು? ಆದಿ ಕನ್ನಡಿಗರೆಲ್ಲಾ ಕರ್ನಟಕವನ್ನು ಬಿಟ್ಟು ಕೇರಳ ತಮಿಳುನಾಡು ಸೇರಿಕೊಳ್ಳಿ ಎನ್ನುತ್ತಿದ್ದರಾ?

ಉತ್ತರ ಭಾರತದಲ್ಲಿ ನಡೆಯುವುದು ಮಾತ್ರ ಜಾತಿ ದೌರ್ಜನ್ಯಗಳಾ? ದಕ್ಷಿಣ ಭಾರತವೇನು ಕ್ಲೀನ್ ಹ್ಯಾಂಡಾ?

ಏನಾಗಿದೆ ಇವರುಗಳಿಗೆ? ಕನ್ನಡ ಜನ ಈ ಕಂಡಕಂಡವರ ಸಿದ್ದಾಂತಗಳಿಗೆ ಅಡಿಯಾಳಾಗಿ ತಾಯಿನೆಲ ತಾಯಿನುಡಿಗಳ ತಲೆಹೊಡೆಯುವ ಬುದ್ಧಿ ಬಿಡುವುದು ಯಾವಾಗಾ?

ಪರನಾಡುಗಳಲ್ಲಿ ಅವರುಗಳ ಮೇಲೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳಿಗೆ ಮರುಕ ವ್ಯಕ್ತಪಡಿಸುವ. ಅವರ ಬೆಂಬಲಕ್ಕೆ ನಿಲ್ಲುವ. ಅದನ್ನು ಬಿಟ್ಟು ಅತಿರೇಕದ ಬುದ್ದಿ ತೋರಿ ಊರುಬಿಟ್ಟು ಇಲ್ಲಿ ಬನ್ನಿ ಎಂದು ಕರೆವುದು ನಮಗೆ ನಾವು ಮಾಡಿಕೊಳ್ಳುವ ಅವಮಾನ ಅಷ್ಟೇ ಅಲ್ಲ, ಅವರುಗಳನ್ನೂ ಹೇಡಿಗಳಂತಾಗಿಸಿ ಅವರಿಗೂ ಮಾಡುವ ಅವಮಾನವೇ ಆಗಿದೆ.

ಆಕ್ರೋಶ ಆತುರಗಳಲ್ಲೂ ಸಹ ಮೈಮರೆತು ತಾಯಿ, ತಾಯ್ನೆಲ, ತಾಯ್ನುಡಿಗಳಿಗೆ ಕುತ್ತು ತಂದೊಡ್ಡಿಕೊಳ್ಳುವ ಯೋಚನೆ ಮಾಡಬಾರದು. ಇಂಥದ್ದು ಆಗಿಯೇ ನಮ್ಮೊಳಕ್ಕೆ ಪರಕೀಯರು ಒಕ್ಕಿದ್ದು.

ಈ ನೆಲದವರು ನಾವು ಎಂಬ ಹಮ್ಮು ಇದ್ದಮೇಲೆ ಈ ನೆಲತನ ನಮ್ಮ ಜನ ನಮ್ಮ ಮೊದಲ ಆದ್ಯತೆ ಆಗಿರಬೇಕು.‌ ಅವರ ದಲಿತ ಪರ ಹೋರಾಟದ ಬಗ್ಗೆ ಯಾವುದೇ ತಕರಾರಿಲ್ಲ. ಆ ವಿಚಾರದಲ್ಲಿ ಅವರೊಂದಿಗೆ ನಾವು ನಿಲ್ಲುತ್ತೇವೆ. ಆದರೆ ಕನ್ನಡ ಡೆಮಾಗ್ರಫಿ ಹಾಳು ಮಾಡುವ ಮಾತಾಡಿದರೆ ಅದಕ್ಕೆ ನಮ್ಮ ಬೆಂಬಲ ಇಲ್ಲ.

ಬಾಂಗ್ಲಾ ಹಿಂದೂಗಳು ದಂಡಿದಂಡಿಯಾಗಿ ಕರ್ನಾಟಕಕ್ಕೆ ವಲಸೆಯಾಗುತ್ತಿದ್ದ ಕಾಲವದು. ಎಲ್ಲಾ ಹಿಂದುತ್ವವಾದಿಗಳು, ಕೇಸರಿಪಡೆಯು “ಅವರೂ ಹಿಂದೂಗಳೇ ಅಲ್ವಾ? ಬಿಡಿ ಬಂದಿರಲಿ” ಎಂದು ಅದನ್ನು ಬೆಂಬಲಿಸಿ. ಆಗಲೂ ಯಾರಿಗೂ ಕನ್ನಡ ಡೆಮಾಗ್ರಫಿ ಬಗ್ಗೆ ಕಾಳಜಿ ಇದ್ದಂತಿರಲಿಲ್ಲ. ಈಗ ಕನ್ನಡನಾಡಿನ ಆದಿಜನರೂ ಅವರಂತೆಯೇ ವರ್ತಿಸಿತ್ತಿರುವುದು ದರಂತವಲ್ಲದೇ ಮತ್ತೇನು ಅಲ್ಲ! ನಾವೂ ಅವರನ್ನು ವಿರೋಧಿಸಿದ್ದೇವೆ. ಈಗಲೂ ನಮ್ಮದು ಅಂಥದ್ದೇ ನಿಲುವು. ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು.

ನಮ್ಮ ಅರಸೊತ್ತಿಗೆಗಳು ಬಿದ್ದಂತೆ ನಾವೂ ಬಿದ್ದೆವು, ಆಳಿದವರ ಕಾಲ್ತುಳಿತಕ್ಕೊಳಪಟ್ಟೆವು. ಬಹುಭಾಗ ನಮ್ಮ ಸಂಸ್ಕೃತಿ ಆಚರಣೆ ರೀವಾಜುಗಳಿಂದ ವಂಚಿತವಾದೆವು. ಕಾಲ ಕಳೆದಂತೆ, ಬದುಕಿನ ಅನಿವಾರ್ಯತೆಗಳಿಗೆದರಾಗಿ, ಇತಿಹಾಸ ವೈಷಮ್ಯಗಳು ಅಳಿದು, ಸ್ನೇಹದಿಂದಲೋ, ಅವಶ್ಯಕತೆಯಿಂದಲೋ, ಅನಿವಾರ್ಯದಿಂದಲೋ ಆ ಗಾಯಗಳಿಗೆ ಔಷಧಿ ಬೀಳುತ್ತಿದೆ. ಅದಕ್ಕೆ ಮದ್ದನ್ನು ಹಚ್ಚಿ ಇನ್ನಷ್ಟು ಬೇಗ ಅದನ್ನು ವಾಸಿಯಾಗುವಂತೆ ನಿಗಾವಹಿಸಬೇಕೇ ಹೊರತು ಅದನ್ನು ಕೆರೆದು ಕೆದಕಿ ಗಾಯಗಳು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಬಾರದು.

ಗಾಯ ಇದ್ದರೂ ಇಲ್ಲವೆಂದು ತೋರಿಕೊಳ್ಳುವುದು ಎಷ್ಟು ದಡ್ಡತನವೋ, ಅದನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವುದು ಅಷ್ಟೇ ದಡ್ಡತನ. ಭಾರತೀಯತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳ ನೆಪವೊಡ್ಡಿ ಕೆಟ್ಟದ್ದನ್ನು ಉಳಿಸಿಕೊಳ್ಳುವುದು ಗಾಯ ಇದ್ದರೂ ಇಲ್ಲವೆಂಬಂತೆ ತೋರಿಸಿಕೊಳ್ಳುವ ದಡ್ಡತನವಾದರೆ, ಎಲ್ಲರೂ ಜಾತೀಯತೆ ಬೇದಗಳ ಮರೆತು ಒಂದುಗೂಡುವ ಹೊತ್ತಿನಲ್ಲಿ ಮತ್ತದೇ ಶೋಷಣೆಯ ಗುಂಗಿನಲ್ಲಿ ಬೆರೆಯುವ ಹೊತ್ತಿನಲ್ಲಿ ಬೇರೆ ನಿಲ್ಲುವುದು ಗಾಯವನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವಂತ ದಡ್ಡತನವಾಗಿದೆ. ಕನ್ನಡ ಪರತೆ ಎಂದರೆ ಅದು ನಾವು ಕಟ್ಟಿದ ನುಡಿಗೆ ನಾವು ನೀಡುವ ರಕ್ಷಣೆ. ಇಂಥಹ ಕೆಲಸದಲ್ಲಿ ಜಾತೀಯತೆ ಬೇಧಗಳನ್ನು ಮೀರಿ ಕನ್ನಡಿಗರೊಡನೆ ಬೆರೆವುದು ಸಹ ಒಂದು ಬಲಿಷ್ಠವಾದ “ಜಾತೀಯತೆ ನಾಶದ ಅಸ್ತ್ರ”ವೇ ಆಗಿದೆ. ಕನ್ನಡಿಗನೆಂಬ ಮಾನದಂಡದೆದುರು ಎಲ್ಲರೂ ಒಗ್ಗೂಡುವುದಾದರೆ ಅದಕಿಂತ ಒಳ್ಳೆಯ ಜಾತೀಯತೆ ವಿನಾಶದ ಅಸ್ತ್ರ ಬೇಕೆ? 

ಏಳಿ, ಎಚ್ಚರಿಕೆಯಿಂದಿರಿ. ಕನ್ನಡ ಕೇಂದ್ರಿತ ರಾಜಕಾರಣದ ರೂವಾರಿಗಳಾಗುವ ವಿಫುಲ ಅವಕಾಶಗಳಿವೆ. ಇದು ಅವಕಾಶವಷ್ಟೇ ಅಲ್ಲ, ಆದಿ ಕನ್ನಡಿಗರಾಗಿ ನಮ್ಮ ಜವಾಬ್ದಾರಿಯೂ ಹೌದು. ಇದು ನಮ್ಮ ಆದಿ ಕನ್ನಡ ಪರಂಪರೆಗೆ ನಾವು ಕೊಡುವ ಕೊಡುಗೆ. ಇದನ್ನು ಕಾಯ್ದು ಬೆಳೆಸಿದರೆ ಕನ್ನಡವೆಂಬ ಕೂಟವು ಜಾತೀಯತೆಯ ಬೇಧಗಳನ್ನು ಮೀರಿ ನಿಂತು ಅಲ್ಲಿ ಎಲ್ಲರೊಳಗೊಬ್ಬರಾಗಿ ಕನ್ನಡಿಗರಾಗಿ ಬದುಕನ್ನು ಕಟ್ಟಿಕೊಳ್ಳುವ ವ್ಯವಸ್ಥೆಯನ್ನೇ ಹುಟ್ಟಿಹಾಕಬಹುದು.

ಒಂದು ವಿಚಾರವನ್ನು ಮರೆಯಬಾರದು. ಭಾಷೆಯೇ ಮನುಷ್ಯನನ್ನು ಇತರೆ ಪ್ರಾಣಿವರ್ಗದಿಂದ ಭಿನ್ನವಾಗಿಸಿ ಮನುಷ್ಯನನ್ನು ಮಾಡಿದೆ. ಭಾಷೆಯಿಂದಲೇ ನಾಗರೀಕತೆ. ಭಾಷೆಯಿಂದಲೇ ಸಂಸ್ಕೃತಿ ಪರಂಪರೆಗಳು, ಮತ ಧರ್ಮಗಳು. ಅದಿಲ್ಲದೇ ಮನುಷ್ಯ ಇತರವುಗಳಂತೆ ಯಕಶ್ಚಿತ್‌ ಒಂದು ಪ್ರಾಣಿ. ಅಂಥ ಕನ್ನಡವು ಆದಿ ಕನ್ನಡಿಗರು ಕಟ್ಟಿದ ನಾಗರೀಕತೆ, ನಾಡು, ಸಂಸ್ಕೃತಿ, ಪರಂಪರೆಗಳಾಗಿವೆ. ಅದರ ಉಳಿವೆ ನಮ್ಮ ಉಳಿವು ಎಂಬಂತೆ ಸಾಧಿಸುವುದು ಸಹ ನಮ್ಮ ಜವಬ್ದಾರಿಯೇ. ಕನ್ನಡದ ವಾರಸುದಾರರಾಗಿ ಮುಂದೆ ನಿಂತು ಎಲ್ಲಾ ರೀತಿಯ ಅಸಮಾನತೆಯನ್ನು ಮೀರಿ ಬೆಳೆಯುವುದು ನಮ್ಮ ಕರ್ತವ್ಯವೂ ಹೌದು.

ನೆನಪಿರಲಿ. ನಮ್ಮ ಪೂರ್ವಜರು, ಆದಿ ಕನ್ನಡಿಗರು ಕನ್ನಡಕ್ಕೆ ಅಂಟಿಕೊಂಡು ನಾಡನ್ನು ಕಟ್ಟುದವರು. ವೈಭವೋಪೇತ ಸಾಮ್ರಾಜ್ಯಗಳನ್ನು ಹುಟ್ಟಿಹಾಕಿದವರು. ನಮ್ಮ ಒಳಿತು ಕೆಡುಕುಗಳಿಗೆ ನಾವೇ ಹೊಣೆಯಾಗಿದ್ದೇವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಾವಿಡುವ ಹೆಜ್ಜೆ ನಮ್ಮ ಪಾಲಿಗೆ, ನಮ್ಮ ಸಮುದಾಯದ ಪಾಲಿಗೆ, ನಮ್ಮ ಕನ್ನಡದ ಪಾಲಿಗೆ ರಚನಾತ್ಮಕ (Constructive) ಆಗಿ ಇರಬೇಕು. ಆದದ್ದು ಆಗಿಹೋಗಿದೆ. ಅದೇ ಗುಂಗಿನಲ್ಲಿ ಕಾಲ ಕಳೆದರೆ, ಅವುಗಳ ಬೆನ್ನಿಗೆ ಬಿದ್ದು ಅದರದೇ ಸನ್ನಿಯಲ್ಲಿ ಮುಳುಗಿ ಬೌದ್ಧಿಕ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುವುದು ನಮಗೂ ನಮ್ಮ ಮುಂದಿನ ಪೀಳಿಗೆಗೂ, ಸಮುದಾಯಕ್ಕೂ ವಿನಾಶಕಾರಿ (destructive) ಆಗಿದೆ.

ಹೊಲಯ ಮಾದಿಗರು ಯಾರೊಡನೆ ನಿಲ್ಲಬೇಕು, ಯಾರ ಪರವಾಗಿರಬೇಕು ಎಂದು ಸ್ಪಷ್ಟವಾಗಿ ನಿರ್ಧರಿಸಬೇಕಿದೆ. ಹೊಲಯರು ಮತ್ತು ಮಾದಿಗರನ್ನು ಮೇಲೇರಲು ಉತ್ತಮ ಮಾರ್ಗ ಯಾವುದು?

ನಗರೀಕರಣ, ಸೌಹಾರ್ದತೆ, ಸ್ನೇಹಸಂಬಂಧ, ಒಂದು ಸಾಮಾನ್ಯ ಗುರಿಗಾಗಿ ಜಾತಿಬೇಧಗಳ ಮರೆತು ಒಂದಾಗಿ ಕೆಲಸ ಮಾಡುವ ಸಮಮನಸ್ಸುಗಳ ನಡುವೆ ಬೆಳೆಯುವುದು, ಇತ್ಯಾದಿ ವಿಚಾರಗಳ ಭಾಗವಾಗಿ ಸಮಾಜದ ಮುಖ್ಯವಾಹಿನಿಯೊಂದಿಗೆ ಹೊಂದಿಕೊಳ್ಳುವುದೇ?

ಅಥವಾ ಕೆಲವು ರಾಜಕೀಯ ಸಿದ್ಧಾಂತಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಲಾಭವಾಗುವಂತೆ ಅವರಿವರ ಸಿದ್ದಾಂತಗಳ ಅಡಿಯಾಳುಗಳಾಗಿ ಗಲಭೆ ಸಂಘರ್ಷಗಳಲ್ಲಿ ಮುಳುಗಿಹೋಗುವುದಾ? ಹಿಂದೆ ನಡೆದುಹೋದ ಶೋಷಣೆಯ ಗುಂಗಿನಲ್ಲೇ ಮುಂದಿನ ಭವಿಷ್ಯದ ಸೊಗಸನ್ನೆಲ್ಲಾ ಕಳೆದುಕೊಳ್ಳುವುದಾ?

ನಾಡು ನುಡಿಯ ಸಿದ್ದಾಂತದಲ್ಲಿ, ನುಡಿ ಕೇಂದ್ರಿತ ರಾಯಕಾರಣದಲ್ಲಿ ಸ್ವಾಭಿಮಾನದ ರಾಜಕೀಯ ಪ್ರವೃತ್ತಿಯನ್ನು ರೂಢಿಸಿಕೊಂಡು ನಿಮ್ಮಲ್ಲಿರುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಈ ನಮ್ಮ ನಾಡಿಗೂ ನಮ್ಮ ನುಡಿಗೂ ನಮ್ಮ ನಾಡ ಜನರಿಗೂ ಆದಿ ಕನ್ನಡಿಗರಾದ ನಾವು ಕೊಡುವ ಒಳ್ಳೆಯ ಕೊಡುಗೆಯಾಗುತ್ತದೆ.

ಯಾರು ನಿಮ್ಮ ನಿಜ ಇತಿಹಾಸ ವಿಚಾರಗಳನ್ನು ಹಂಚಿಕೊಳ್ಳುವರೋ, ಯಾರು ನಿಮ್ಮಲ್ಲಿರುವ ಜಾತಿ ಕೀಳರಿಮಗೆ ಮದ್ದನ್ನು ಕೊಟ್ಟು ಅದನ್ನು ನಿವಾರಿಸುವರೋ, ನಿಮ್ಮ ಆದಿಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಬರೆದು ನಿಮ್ಮಲ್ಲಿ ಅರಿವು ಮೂಡಿಸುವವರೋ, ಯಾರು ನಿಮಗೆ ಉದ್ದಾರವಾಗಲು ಉದ್ಯಮಗಳ ಐಡಿಯಾಗಳನ್ನು ನೀಡುವರೋ, ಅದಕ್ಕೆ ಪೂರಕವಾದ ಮಾಹಿತಿ, ಸೌಲಭ್ಯಗಳನ್ನು ಹಂಚಿಕೊಳ್ಳುವರೋ, ಹೀಗೆ ನಿಮ್ಮ ಒಳಿತಿಗೆ ಕಾರಣವಾಗುವ ಯಾವುದೇ ವಿಚಾರದೊಂದಿಗೆ ನಿಲ್ಲಿ. ಶಿಕ್ಷಣ, ದುಡಿಮೆ/ಉದ್ಯಮ, ಭೂ ಹಿಡುವಳಿ, ಸಂಘಟನೆ, ನಾಡು ನುಡಿ ನೆಲ ಜನ ಕೇಂದ್ರಿತ ಸಿದ್ದಾಂತ, ಸಕ್ರೀಯ ರಾಜಕಾರಣ ಆಸಕ್ತಿಯಷ್ಟೇ ನಮ್ಮನ್ನು ಉದ್ದರಿಸುವುದು.

No comments:

Post a Comment

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...