ದ್ರಾವಿಡ ಭಾಷಿಕರನ್ನೂ ಸೇರಿಸಿಕೊಂಡಂತೆ, ಒಟ್ಟಾರೆ ಭಾರತೀಯರ ವಿಲಕ್ಷಣ ತಿಳಿವಳಿಕೆಯ ಬಹುದೊಡ್ಡ ಸಮಸ್ಯೆ ಏನೆಂದರೆ ಪುರಾಣ-ಮಹಾಕಾವ್ಯಗಳನ್ನೇ ಇತಿಹಾಸ ಅಂತ ನಂಬುವುದು! ಈ ನೆಲದ ಇಂದಿನ ಕೋಮುವಾದೀ ದುರಂತಗಳು ಮತ್ತವು ಉಂಟುಮಾಡಿರುವ ತಲ್ಲಣ, ದುಗುಡಗಳಿಗೆ ಈ ಬಗೆಯ ಮೌಢ್ಯದ ಮನಃಸ್ಥಿತಿಯೇ ಬಹುಮುಖ್ಯ ಕಾರಣವಾಗಿದೆ. ಕೆಲವು ಪುರಾಣ- ಮಹಾಕಾವ್ಯಗಳಿಗೆ ಚರಿತ್ರೆಯ ಕೆಲವಂಶಗಳು ಪ್ರಭಾವ ಬೀರಿ ಪ್ರೇರಣೆ ನೀಡಿರಬಹುದಾದರೂ ಪುರಾಣಗಳು ಖಂಡಿತ ನೇರ ಇತಿಹಾಸವಲ್ಲವೇ ಅಲ್ಲ.
ಇತ್ತೀಚಿನ ಕೆಲ ವರ್ಷಗಳಿಂದ ಮೈಸೂರಿನ ಪ್ರಗತಿಪರ ಮಿತ್ರರ `ಮಹಿಷ ದಸರ’ ಸುದ್ದಿ ಮಾಡುತ್ತಿದೆ. ಮಹಿಷಾಸುರ, ಮಹಿಷಮಂಡಲ ಮತ್ತು ಮಹಿಷಾಸುರ ಮರ್ದಿನಿ ಪುರಾಣಕ್ಕೆ ಸಂಬಂಧಿಸಿದಂತೆ ಕೆಲವು ಚಾರಿತ್ರಿಕವೆಂದು ಹೇಳಲಾಗುವ ಅಂಶಗಳನ್ನು ಮುನ್ನೆಲೆಗೆ ತಂದು ಅಚಾರಿತ್ರಿಕವಾದ ನಿರೂಪಣೆಯೊಂದನ್ನು ಮಂಡಿಸಲಾಗುತ್ತಿದೆ. ಅವರ ಉದ್ದೇಶ ಒಳ್ಳೆಯದಾದರೂ, ಅಸಮಂಜಸವಾದ ಆಚರಣೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆಂಬುದೇ ನನ್ನ ಖಂಡಿತವಾದ ಅಭಿಮತ. ಈ ನೆಲದಲ್ಲಿ ಸಂಭವಿಸಿದ, ಸಂಭವಿಸುತ್ತಿರುವ ಸಂಸ್ಕೃತಿ ಮತ್ತು ಧಾರ್ಮಿಕ ನೆಲೆಗಳಲ್ಲಿನ ವಿರೂಪಗೊಳಿಸಲ್ಪಟ್ಟ ಪಲ್ಲಟಗಳು, ವೈದಿಕಶಾಹಿಯ ಸಾಂಸ್ಕೃತಿಕ ವಸಾಹತುಶಾಹಿ ದೆಸೆಯಿಂದ ತಿರುಚಲ್ಪಟ್ಟ ಐತಿಹಾಸಿಕ ಸಂಗತಿಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿಯುತವಾದ ಸಂಸ್ಕೃತಿ ಚಿಂತಕರು ಖಂಡಿತ ಚಾರಿತ್ರಿಕ ಸಾಕ್ಷö್ಯಧಾರಗಳ ಮೂಲಕ ವಾಸ್ತವತೆಗೆ ಹತ್ತಿರದ ಹೊಸ ಹಾಗೂ ಮೂಲ ನಿರೂಪಣೆಗಳನ್ನು ಮಂಡಿಸಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಜಟಿಲ ಸವಾಲುಗಳನ್ನು ಒಡ್ಡಿವೆಯೆಂಬುದು ನಿಜ. ಆದರೆ ನಮ್ಮಂತಹವರು ಕೂಡ ವಿರೂಪಗಳಿಗೆ ಪ್ರತಿಯಾಗಿ ಮತ್ತೊಂದು ವಿರೂಪಗೊಂಡ ನಿರೂಪಣೆಯ ಸಮರ್ಥಕರಾಗಿ ನಿಂತುಬಿಟ್ಟರೆ ನಮ್ಮ ಸಂಸ್ಕೃತಿ ಹೋರಾಟಗಳ ಬಗೆಗಿನ ಆತ್ಮವಿಶ್ವಾಸವು ದುರ್ಬಲಗೊಂಡು, ನಾವು ಜನಶಕ್ತಿಯ ಬೆಂಬಲವನ್ನೂ ಕಳೆದುಕೊಳ್ಳುತ್ತೇವೆ. ಅದರೊಂದಿಗೆ ಮುಂದಿನ ದಿನಗಳ ನಮ್ಮ ಸಂಸ್ಕೃತಿ ಇತಿಹಾಸದ ಕುರಿತ ಸತ್ಯನಿಷ್ಠ ನಿರೂಪಣೆಗಳನ್ನೂ ಸಮಾಜ ಅನುಮಾನಿಸುವುದರೊಂದಿಗೆ ಕ್ರಿಯಾತ್ಮಕವಾಗಿ ಸ್ಪಂದಿಸದೇ ಹೋಗಬಹುದಾದ ಅಪಾಯಗಳು ಕೂಡ ಇಲ್ಲದೇ ಇಲ್ಲ. ನಾವು ಎಂದೆಂದಿಗೂ ಸತ್ಯ ಪಕ್ಷಪಾತಿಗಳಾಗಿ, ಎಂತಹುದೇ ಮುಲಾಜುಗಳಿಗೂ ಒಳಗಾಗದೇ ಸತ್ಯಾಗ್ರಹಿಗಳಾಗಿ ನಿಲ್ಲುತ್ತೇವೆಂಬುದೇ ನಮ್ಮ ನಿಜವಾದ ನೈತಿಕ ಶಕ್ತಿ ಎಂಬ ಮಹತ್ವದ ಅಂಶವನ್ನು ನಾವು ಮರೆಯಲೇಬಾರದಲ್ಲವೇ? ಪುರಾಣ ಸೃಷ್ಠಿಯ ಪಾತ್ರವಾದ ಮಹಿಷಾಸುರ ದ್ರಾವಿಡ ಮೂಲದ ನಮ್ಮವನು ಅಂತ ನಂಬಿರುವುದರ ಹಿಂದಿನ ಭಾವುಕ ಹಾಗೂ ದುರ್ಬಲ ಕಾರಣಗಳು ಬಹುಶಃ ಇವಾಗಿರಬಹುದು:
೧. ವೈದಿಕರಿಗಿಂತಲೂ ಪ್ರಾಚೀನರಾದ ದ್ರಾವಿಡರು ಮತ್ತು ದ್ರಾವಿಡಪೂರ್ವ ಮೂಲನಿವಾಸಿ ಬುಡಕಟ್ಟುಗಳು ಹಾಗೂ ಒಟ್ಟಾರೆ ಶೈವ ಮೂಲದವರನ್ನು ಕಕೇಷಿಯನ್ ಆರ್ಯ ವೈದಿಕರು ತಮ್ಮ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಅಸುರರು, ದಾನವರು ಮತ್ತು ರಾಕ್ಷಸರು ಎಂಬಂತೆ ಕೆಡುಕಿನ ದುಷ್ಟ ಪಾತ್ರಗಳನ್ನಾಗಿ ಚಿತ್ರಿಸುವುದರ ಮೂಲಕ ಜನಾಂಗೀಯ ಅಸಹನೆಯ ನೆಲೆಯಲ್ಲಿ ಅಪಮಾನಿಸಿದ್ದಾರೆ ಎಂಬ ಸರಳ ಸಮೀಕರಣದ ತಪ್ಪು ಗ್ರಹಿಕೆಗಳು. ದಾಸ, ದಸ್ಯು, ಶಂಬರ, ನಿಷಾದ, ಅಯಜ್ಞೇಯ ಮತ್ತು ಅನಿಂದ್ರರು ಅಂತ ದೂಷಿಸಿದ್ದಾರೆ ಎಂಬ ಆಧಾರವಿಲ್ಲದ, ಅಚಾರಿತ್ರಿಕ ಗ್ರಹಿಕೆಗಳು. ದಾಸ ಮತ್ತು ದಸ್ಯುಗಳು ಕೂಡ ಭಿನ್ನ ಆರ್ಯ ಪಂಗಡಗಳೆ. ಸು_ದಾಸ, ದಿವೋದಾಸ ಮತ್ತು ತ್ರಸದಸ್ಯು ಇತ್ಯಾದಿಗಳನ್ನು ಗಮನಿಸಬಹುದು.
೨. ಮಹಿಷ ಎಂದರೆ ಎಮ್ಮೆ ಅಥವ ಕೋಣ ಅಂತಿರುವುದರಿಂದಲೂ ಮತ್ತು ಎಮ್ಮೆ/ ಕೋಣಗಳು ತಳ ಸಂಸ್ಕೃತಿಯ ಪ್ರತೀಕವೆಂಬ ಗ್ರಹಿಕೆಯ ಹಿನ್ನೆಲೆಯಲ್ಲಿಯೂ ಮಹಿಷಾಸುರ ಖಂಡಿತ ದ್ರಾವಿಡ ಮೂಲದವನೇ ಆಗಿರಬೇಕೆಂಬ ಮೇಲ್ನೋಟದ ದುರ್ಬಲ ತರ್ಕ-ತೀರ್ಮಾನಗಳಿಗೆ ಬಂದು ತಲುಪಿರುವುದು. ಯಮನ ವಾಹನವೂ ಕೋಣವೇ. ಕೇರಳದಲ್ಲಿ ವಿಷ್ಣುಮಾಯ ಎಂಬುದಾಗಿ ವೈದಿಕೀಕರಣಗೊಂಡಿರುವ ಕುಟ್ಟಿ ಚಾತ್ತನ್‌ನ ವಾಹನವೂ ಕೋಣವೇ. ನೀಲಗಿರಿ ತೋಡರ ಕುಲಮೂಲ ಸಂಸ್ಕೃತಿಯ ಪ್ರಧಾನ ಭಾಗವೇ ಕೋಣ. ಮಹಿಷ ಹೆಸರಿನ ಬುಡಕಟ್ಟುಗಳೂ ಉತ್ತರ ಭಾರತದಲ್ಲಿವೆ. ಅನೇಕ ಸಮುದಾಯಗಳ ಕುಲ ಬೆಡಗುಗಳಾಗಿಯೂ ಕೋಣ/ ಎಮ್ಮೆ ಇರುವುದನ್ನೂ ನಾವು ಬಲ್ಲೆವು. ಆದರೆ ಇರ್ಯಾರೂ ತಮ್ಮ ಕುಲವನ್ನು ಹೀನೈಸಲಿಕ್ಕಾಗಿಯೇ ಮಹಿಷಾಸುರ ಮರ್ದಿನಿ ಪುರಾಣವನ್ನು ಸೃಷ್ಟಿಸಲಾಗಿದೆಯೆಂದು ಭಾವಿಸಿಲ್ಲ. ಆಸ್ಟೊçÃ-ಏಷಿಯಾಟಿಕ್‌ನ ಸಮುದಾಯಗಳಲ್ಲಿ `ಅಸುರ’ ಎಂಬ ಬುಡಕಟ್ಟೊಂದು ಜಾರ್ಖಂಡ್‌ನಲ್ಲಿದ್ದು, ಅವರು ಕೂಡ ಮಹಿಷಾಸುರ ತಮ್ಮ ಕುಲಮೂಲದ ಆದಿಪುರುಷನೆಂದೇ ಭ್ರಮಿಸಿ ಪ್ರತೀವರ್ಷವೂ ಮಹಿಷ ದಸರ ಆಚರಿಸುತ್ತಿದ್ದಾರೆ. ಏಕಕಾಲಕ್ಕೇ ಎರಡು ಪ್ರದೇಶಗಳಲ್ಲಿ ಮಹಿಷಾಸುರನಿರುವುದು ಸಾಧ್ಯವಿಲ್ಲದಿರುವಂತೆಯೇ, `ಅಸುರ’ - `ಮಹಿಷ’ ಎಂಬ ಬುಡಕಟ್ಟುಗಳ ಹೆಸರುಗಳು ಕೂಡ ಸಂಸ್ಕೃತ ಮೂಲದ ಹೆಸರುಗಳಾಗಿದ್ದು, ಆ ಬುಡುಕಟ್ಟುಗಳ ಮೇಲೆ ಹೇರಲ್ಪಟ್ಟಿರಬೇಕು, ಇಲ್ಲವೇ ಸಾಂಸ್ಕೃತೀಕರಣದ ಅನುಕರಣಶೀಲತೆಯ ಫಲವಾಗಿರಬೇಕು. ಇನ್ನು ತಮಿಳಿನ ಸಂಗಂ ಸಾಹಿತ್ಯದಲ್ಲಿ ಪ್ರಾಚೀನ ಮೈಸೂರು ಪ್ರದೇಶವನ್ನು ಎರುಮೈನಾಡು ಎಂದು ಹೆಸರಿಸಿರುವುದರಿಂದ ಮಹಿಷಾಸುರ ಈ ಪ್ರದೇಶದವನೇ ಆಗಿರಬೇಕೆಂಬ ತರ್ಕವೂ ಕಟ್ಟುಕಥೆಗೆ ನೀರೆರೆದಿದೆ.
೩. ಕೊನೆಯದಾಗಿ, ಅಶೋಕ ಸಾಮ್ರಾಟನು ಬೌದ್ಧ ಧರ್ಮದ ಪ್ರಸಾರಕ್ಕೆಂದು ಮಹದೇವ ತೇರಾ ಎಂಬ ಭಿಕ್ಕುವನ್ನು ಮಹಿಷಮಂಡಲಕ್ಕೆ ಅರ್ಥಾತ್ ಮೈಸೂರು ಪ್ರಾಂತ್ಯಕ್ಕೆ ನಿಯೋಜಿಸಿದನಾಗಿ, ಆತ ಇಲ್ಲಿಗೆ ಬಂದು ಆರ್ಯಾವರ್ತದ ಆರ್ಯ ರಾಜರುಗಳ ಮೇಲೆ ಯುದ್ಧ ಮಾಡಿ ದ್ರಾವಿಡ ಸಾಮ್ರಾಜ್ಯವನ್ನು ಕಟ್ಟಿದ ಎಂಬಂಶ. ಈ ಹಿನ್ನೆಲೆಯಲ್ಲಿ ಈ ಮಹದೇವ ತೇರಾ ಅಥವಾ ಮಹಿಷಾಸುರನನ್ನು ಹೀನೈಸುವ ಸಲುವಾಗಿಯೇ ಮಹಿಷಾಸುರ ಮರ್ದಿನಿ ಪುರಾಣವನ್ನು ರೂಪಿಸಲಾಗಿದೆಯೆಂಬ ಮತ್ತೊಂದು ತಾಳ-ಮೇಳ ಕೂಡದ ಕಟ್ಟುಕಥೆ. ಈ ಮೂರು ಅಂಶಗಳು ಖಂಡಿತ ಚಾರಿತ್ರಿಕವಾದ ಗಟ್ಟಿ ಆಧಾರಗಳ ಮೇಲೆ ರೂಪುಗೊಂಡ ಗಂಭೀರ ಅಧ್ಯಯನಗಳಾಗಿಲ್ಲ ಎಂಬುದೇ ಮಹಿಷ ದಸರ ಪರಿಕಲ್ಪನೆಯ ಬಹುಮುಖ್ಯ ಲೋಪವಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಿಷ ದಸರ, ಮಹಿಷಮಂಡಲ ಹಾಗೂ ಮಹಿಷಾಸುರ ಮರ್ದಿನಿ ಪುರಾಣಗಳಿಗೆ ಸಂಬಂಧಿಸಿದಂತೆ ಚಾರಿತ್ರಿಕ ಸತ್ಯದ ಕೆಲವಂಶಗಳೊಂದಿಗೆ ಇಲ್ಲಿ ಚರ್ಚಿಸುವ ಪ್ರಯತ್ನ ನಡೆಸಲಾಗಿದೆ.
ಮೈಸೂರಿನ ಪುನ್ನಾಟರು ಮತ್ತು ಚರಿತ್ರ:
ಮೈಸೂರಿನ ಚರಿತ್ರೆ ಪ್ರಾರಂಭವಾಗುವುದೇ ಕ್ರಿ.ಪೂ. ಪುನ್ನಾಟ ಎಂಬ (ಬುಡಕಟ್ಟು ಮೂಲ!) ರಾಜವಂಶದ ಆಳ್ವಿಕೆಯಿಂದಲೇ. ಪುನ್ನಾಟರು ಬಹುಶಃ ಕ್ರಿ.ಪೂ. ೩ನೇ ಶತಮಾನದಿಂದ ಆರಂಭಿಸಿ, ಕ್ರಿ.ಶ. ೧೪ನೇ ಶತಮಾನದವರೆಗೂ ಅಲ್ಪ ಪ್ರಮಾಣದಲ್ಲಾದರೂ ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಇದ್ದರೆಂಬುದಕ್ಕೆ ಸಾಕ್ಷಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕ್ರಿ.ಶ. ೧೩೨೦ರ ಶಿವಪುರ ಶಾಸನ ಪುನ್ನಾಟರ ಬಗ್ಗೆ ಪ್ರಸ್ತಾಪಿಸಿರುವುದನ್ನು ಗಮನಿಸಬಹುದು. ಹೆಗ್ಗಡದೇವನ ಕೋಟೆಯ `ಕಿತ್ತಿಪುರ’ (ಅಂದಿನ ಕೀರ್ತಿಪುರವಿಂದು ಕಿತ್ತೂರಾಗಿದೆ) ವನ್ನು ಪುನ್ನಾಟರು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದರು. ಕೇರಳದ ಕೆಲಭಾಗಗಳು, ಕೊಯಮತ್ತೂರು, ಕೊಡಗು, ಮೈಸೂರು ಪ್ರದೇಶ, ಹಾಸನ ಹಾಗೂ ದಕ್ಷಿಣ ಕನ್ನಡದೊಂದಿಗೆ ಪೂರ್ವದತ್ತ ಬೆಂಗಳೂರಿನವರೆಗೂ ಪುನ್ನಾಟರ ರಾಜ್ಯ ವಿಸ್ತರಿಸಿಕೊಂಡಿತ್ತು. ಕ್ರಿ.ಪೂ. ೩ನೇ ಶತಮಾನದಲ್ಲಿ ಜೈನಮುನಿ ಭದ್ರಬಾಹು ಭಟಾರರು (ಕ್ರಿ.ಪೂ.೨೯೦-೯೭) ವಿಶಾಖ ಎಂಬಾತನ ನೇತೃತ್ವದಲ್ಲಿ ಜೈನ ಮುನಿಗಳ ತಂಡವೊಂದನ್ನು ಜೈನ ಧರ್ಮದ ಪ್ರಸಾರಕ್ಕಾಗಿ ಪುನ್ನಾಟ ದೇಶಕ್ಕೆ ಕಳುಹಿಸಿದ್ದರು. ನಂತರ ಜೈನರ ಆ ತಂಡ ಗುಜರಾತಿಗೆ ವಲಸೆ ಹೋಯಿತು. ಇಂದಿಗೂ ಗುಜರಾತಿನಲ್ಲಿ ಜೈನ ಪುನ್ನಾಟ ಸಂಘವು ಚಟುವಟಿಕೆಯೊಂದಿಗೆ ಉಳಿದೇ ಇದೆ. ಹರಿವಂಶ ಪುರಾಣದ ಕರ್ತೃ ಜಿನಸೇನ ಸೂರಿ ತಾನು ಬೃಹತ್ ಪುನ್ನಾಟ ಸಂಘಕ್ಕೆ ಸೇರಿದವನೆಂದು ಹೇಳಿಕೊಂಡಿದ್ದಾನೆ. ಅಂದರೆ, ಕ್ರಿ.ಪೂ. ೩ನೇ ಶತಮಾನದಲ್ಲಿ ಇಂದಿನ ಮೈಸೂರು ಪ್ರದೇಶವನ್ನೇ ಕೇಂದ್ರ ಮಾಡಿಕೊಂಡು ಪುನ್ನಾಟರೆಂಬ ರಾಜವಂಶವೊಂದು ಆಳ್ವಿಕೆ ಮಾಡುತ್ತಿತ್ತು ಎಂಬಂಶವು ನಿರ್ವಿವಾದವಾಗಿ ಸಾಬೀತಾದಂತಾಯಿತು.
ಬೃಹತ್ ಕಥಾ ಕೋಶದಲ್ಲಿ `.....ದಕ್ಷಿಣಾಪಥ ದೇಶಸ್ಥ ಪುನ್ನಾಟ ವಿಷಯ...’ ಎಂಬ ಉಲ್ಲೇಖ ಜೈನ ಧರ್ಮೀಯರಿಗೆ ಸಂಬಂಧಿಸಿದಂತೆಯೇ ಉಲ್ಲೇಖಿಸಲ್ಪಟ್ಟಿದೆ. ಜೈನ ವಲಸೆಗಾರರ ಅಂತಿಮ ಗುರಿಯೇ ಪುನ್ನಾಟ ದೇಶ ಎಂಬ ಮಾತೂ ಬೃಹತ್ ಕಥಾ ಕೋಶದಲ್ಲಿದೆ. ಶ. ಶೆಟ್ಟರ್ ಅವರು ತಮ್ಮ `ಶಂಗಂ ತಮಿಳಗಂ’ ಕೃತಿಯಲ್ಲಿ ಪುನ್ನಾಟರಿಗೂ, ದ್ರಾವಿಡ ಸಂಸ್ಕೃತಿಗೂ ನಡುವಿನ ನಿಕಟತೆಯನ್ನು ವಿವರಿಸಿದ್ದಾರೆ. ಸಂಗಂ ಸಾಹಿತ್ಯದಲ್ಲಿನ ಪುನ್ನಾಟರ ಕುರಿತ ಉಲ್ಲೇಖಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಧೀರಜ್ ಎಂ.ಎಸ್. ಎಂಬುವವರು ಕೇರಳ ಜೈನ ಇತಿಹಾಸದಲ್ಲಿನ ಪುನ್ನಾಟ ದೇಶದ ಪಾತ್ರ ಕುರಿತಂತೆ ಸಂಶೋಧನಾ ಕೃತಿಯೊಂದನ್ನು ಬರೆದಿದ್ದು ಅವರೂ ಪುನ್ನಾಟರ ಕಾಲವನ್ನು ಕ್ರಿ.ಪೂ. ೩ನೇ ಶತಮಾನವೆಂದೇ ನಿರೂಪಿಸಿದ್ದಾರೆ. ವಯನಾಡ್ ಮತ್ತು ಪಾಲಕ್ಕಾಡಿನ ಶಾಸನಗಳಲ್ಲಿ `ಪುನ್ನಾಡ ಅಧಿಗಾರಂ’ ಎಂಬ ಮಾತುಗಳಿವೆ. ಹತ್ತುನಾಡುಗಳಿಗೆ ಸಂಬಂಧಿಸಿದ ಪುನ್ನಾಟವನ್ನು ಪದಿನಾಡು ಅಂತಲೇ ಕರೆಯುತ್ತಿದ್ದುದರೊಂದಿಗೆ, ಅದೇ ಹೆಸರಿನ ಊರು ಈಗಲೂ ಮೈಸೂರು ಜಿಲ್ಲೆಯಲ್ಲಿದೆ. ಶ್ರೀಲಂಕಾದ ಬೌದ್ಧ ಗ್ರಂಥ ಮಹಾವಂಶವೂ ಪುನ್ನಾಟರ ಬಗ್ಗೆ ಉಲ್ಲೇಖಿಸಿದೆ. ಶೆಕ್ಕಿಳಾರರ ಪೆರಿಯ ಪುರಾಣಂ `ಪೊನಲ್ ಎನ್ನಾಳುಂ ಪೊಯ್ಯಾದು ಅಳಿಕ್ಕುಂ ಪುನ್ನಾಡು’ ಎಂಬ ಮಾತನ್ನು ಹೇಳಿದೆ. ಅದರರ್ಥ `ನಿರಂತರವಾಗಿ ನದಿನೀರಿನ ಕೃಷಿ/ನೀರಾವರಿಗೆ ಒಳಪಟ್ಟ ಪ್ರದೇಶ ಪುನ್ನಾಟ’ ಎಂದು.
ಮಂಡ್ಯ ಜಿಲ್ಲೆಯ ಮಾಂಬಳ್ಳಿ ಹಾಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಮರಲಿಂಗಂನ ತಾಮ್ರ ಶಾಸನಗಳು `ಕಬಿನಿ ಮತ್ತು ಕಾವೇರಿ ನದಿಗಳ ನಡುವಿನ ಪ್ರದೇಶವೇ ಪುನ್ನಾಟ ರಾಜ್ಯ’ ಎಂಬ ಮಾಹಿತಿಯನ್ನು ನೀಡುತ್ತವೆ. ಕ್ರಿ.ಶ: ೨೩ರಲ್ಲಿ ಭೂಗೋಳ ಶಾಸ್ತಜ್ಞ ಪ್ಲೀನಿ ಮತ್ತು ಕ್ರಿ.ಶ. ೧೨೭ರಲ್ಲಿ ಟಾಲೆಮಿ ಅವರು `ಪೌನ್ನಾಟ’ದ ಬಗ್ಗೆ ಮಾಹಿತಿ ನೀಡಿ, ಅಲ್ಲಿ ಸಿಗುವ ಪಚ್ಚೆ ಕಲ್ಲುಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಪೂರ್ವದಲ್ಲಿ ಕೆಆರ್‌ಎಸ್ ಪ್ರದೇಶ ಹಾಗೂ ಕೊಯಮತ್ತೂರು ಸುತ್ತಮುತ್ತ ಪಚ್ಚೆ ಕಲ್ಲುಗಳು ಸಿಗುತ್ತಿದ್ದವಂತೆ. ತಲಕಾಡು ಗಂಗರು ೪ನೇ ಶತಮಾನದ ಹೊತ್ತಿಗೆ ತಾವೂ ಈ ಪ್ರದೇಶದಲ್ಲಿ ರಾಜ್ಯ ಸ್ಥಾಪಿಸಿದರು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ದೊರೆತ ತಲಕಾಡು ಗಂಗರ ೬ನೇ ಶತಮಾನದ ತಾಮ್ರ ಶಾಸನವು ಗಂಗರ ಅವಿನೀತ ದೊರೆ ಪುನ್ನಾಟರ ರಾಜಕುಮಾರಿ ಜ್ಯೇಷ್ಠಾಳನ್ನು ವಿವಾಹವಾದದ್ದರ ಬಗ್ಗೆ ಉಲ್ಲೇಖಿಸಿದೆ. ಅಂದರೆ ಕ್ರಿ.ಪೂ. ೩ರಿಂದ ೬ನೇ ಶತಮಾನದವರೆಗೂ ಪುನ್ನಾಟರು ಈ ಭಾಗದಲ್ಲಿದ್ದರು ಎಂಬುದು ಖಚಿತವಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕದಲೂರು ಎಂಬಲ್ಲಿ ದೊರೆತಿರುವ ಕ್ರಿ.ಶ. ೮೬೨ರ ತಾಮ್ರ ಶಾಸನವೇ ಮೈಸೂರು ಬಗೆಗಿನ ಪ್ರಪ್ರಥಮ ಉಲ್ಲೇಖವಾಗಿದ್ದು ಅದರಲ್ಲಿ `ಮಯ್‌ಸೂರು’ ಎಂಬ ಉಲ್ಲೇಖವೇ ಕಂಡುಬಂದಿದೆ. ನಂತರ ಹೊಯ್ಸಳರ ಕ್ರಿ.ಶ. ೧೧ ಮತ್ತು ೧೨ನೇ ಶತಮಾನದ ಶಾಸನಗಳಲ್ಲೂ `ಮಯಿಸುನಾಡು’, `ಮಯಿಸೂರುನಾಡು’ ಎಂಬ ಉಲ್ಲೇಖಗಳೇ ಇವೆ. `ಮಯಿಸೂರು’ ಎಂಬ ಈ ಪ್ರಾಚೀನ ಸ್ಥಳನಾಮದ ನಿಷ್ಪತ್ತಿ ಮೂಲವನ್ನು ಹುಡುಕಿದಲ್ಲಿ ಮಯ್ > ಮೈ (Mai) ಎಂಬ ದ್ರಾವಿಡ ಮೂಲದ ಧಾತು ಬಹುಶಃ ನಮಗೆ ನೆರವಾಗಬಲ್ಲದು ಎನಿಸುತ್ತದೆ. `ಮಯ್ʼ ಎಂದರೆ ತಮಿಳಿನಲ್ಲಿ ಕಪ್ಪು, ನೀರು ಮತ್ತು ಪಟ್ಟಣಗಳೆಂಬ ಅರ್ಥಗಳು ದೊರೆಯುತ್ತವೆ. ಈ ಧಾತುವಿನಿಂದ ಸಾಧಿತವಾಗುವ ಪದಗಳಲ್ಲಿ `ಮಯಿಚೂರುʼ ಅರ್ಥಾತ್ ಪಟ್ಟಣ ಎಂಬುದೂ ಒಂದು. ವಿವಿಧ ಇತಿಹಾಸಕಾರರ ವಿವರಣೆಗಳನ್ನೂ ಗಮನದಲ್ಲಿರಿಸಿಕೊಂಡು ಹೇಳುವುದಾದಲ್ಲಿ - ಮಯ್ > ಮಯಿಚೂರು > ಮಯಿಸೂರು > ಮೈಸೂರು ಎಂಬ ನಿಷ್ಪತ್ತಿ ವಿವರಣೆಯೇ ಸತ್ಯಕ್ಕೆ ಹೆಚ್ಚು ಸಮೀಪದ್ದಾಗಿ ನನಗೆ ತೋಚುತ್ತಿದೆ. ದ್ರಾವಿಡ ಭಾಷಾಮೂಲದ `ಮಯಿಸೂರು’ ಎಂಬುದೇ ಅತೀ ಪ್ರಾಚೀನ ಸ್ಥಳನಾಮವಾಗಿರುವುದರಿಂದ, ಈ ಪದದಿಂದ ನಾವು ಹೇಗೂ `ಮಹಿಷೂರು’ ಎಂಬ ಸಂಸ್ಕೃತ ಭಾಷಾ ಮೂಲದ ಸ್ಥಳನಾಮವನ್ನು ಸಾಧಿಸುವುದು ಖಂಡಿತ ಅಸಂಭವನೀಯ. `ಎರುಮೈಯೂರು’ ಎಂಬ ಸಂಗಂ ಸಾಹಿತ್ಯದಲ್ಲಿನ ಉಲ್ಲೇಖವು ಕೂಡ `ಮಹಿಷೂರು’ ಎಂಬ ಸಂಸ್ಕೃತ ಭಾಷೆಯ ಸ್ಥಳನಾಮವೊಂದು ರೂಪುಗೊಳ್ಳಲು ನೆರವು ನೀಡಿರಬಹುದಾದ ಸಾಧ್ಯತೆ ಖಂಡಿತ ಇಲ್ಲವೆಂದೇ ಅನಿಸುತ್ತಿದೆ. ಯಾಕೆಂದರೆ ಎರುಮೈ ಎಂದರೆ ಎಮ್ಮೆ ಎಂಬರ್ಥವೇ ಪ್ರಧಾನವಾದುದು. ಎಮ್ಮೆ ಎಂಬ ಇಂದಿನ ಕನ್ನಡ ಪದ ಸಾಧಿತವಾದದ್ದೇ ಪ್ರಾಚೀನ ಕನ್ನಡದಲ್ಲೂ ಬಳಕೆಯಲ್ಲಿದ್ದ ಎರುಮೈ ಎಂಬ ಪದದಿಂದಲೇ. Common gender ಆಗಿಯೂ ಸಾಂದರ್ಭಿಕವಾಗಿ ಬಳಕೆಗೊಂಡಿದ್ದರೂ, ಕೋಣ ಅಥವ ಮಹಿಷಕ್ಕೆ ತಮಿಳಿನಲ್ಲಿ `ಆಣ್ ಎರುಮೈ’ ಎಂಬ ನಿರ್ದಿಷ್ಟ ಪದದ ಪ್ರಯೋಗವೇ ಇದೆಯೆಂಬುದನ್ನೂ ನಾವು ಗಮನದಲ್ಲಿರಿಸಿಕೊಳ್ಳಲೇಬೇಕು. ಆಣ್ ಎಂದರೆ ತಮಿಳಿನಲ್ಲಿ ಗಂಡು ಎಂಬರ್ಥವಿದೆ.
ಉಳಿದಂತೆ ಹೊಯ್ಸಳ ವಿಷ್ಣುವರ್ಧನನ(ಕ್ರಿ.ಶ.೧೧೨೭) ಶಾಸನವೊಂದರಲ್ಲಿ ಇಂದಿನ ಚಾಮುಂಡಿ ಬೆಟ್ಟವನ್ನು `ಮಹಾಬಲತೀರ್ಥ’ ಎಂದೇ ಉಲ್ಲೇಖಿಸಲಾಗಿದೆ. ಮಹಾಬಲಾದ್ರಿ, ಮಹಾಬಲಾಚಲವೆಂದೂ ಕರೆಯಲಾಗುತ್ತಿತ್ತು. ಯಾಕೆಂದರೆ ಕ್ರಿ.ಶ. ೯೫೦ರ ಸುಮಾರಿಗೇ ಬೆಟ್ಟದ ದೇವರಾಗಿದ್ದದ್ದು ಮಹಾಬಲೇಶ್ವರನಾದ ಶಿವನೇ. ನಂತರ ೧೨ನೇ ಶತಮಾನದಲ್ಲಿ ಹೊಯ್ಸಳರು (ಬಹುಶಃ ವಿಷ್ಣುವರ್ಧನ) ಸಣ್ಣ ಪ್ರಮಾಣದ ಚಾಮುಂಡಿ ಗುಡಿಯನ್ನು ಸ್ಥಾಪಿಸಿದರು. ವಿಜಯನಗರದರಸರು ವಿಮಾನ ಗೋಪುರ ಹಾಗೂ ಪ್ರಾಕಾರಗಳೊಂದಿಗೆ ದೇವಾಲಯವನ್ನು ವಿಸ ್ತರಿಸಿದರು. ದೊಡ್ಡ ದೇವರಾಜ ವಡೆಯರ್ ಅವರು ೧೬೫೦ರಲ್ಲಿ, ಅಂದರೆ ಇಂದಿಗೆ ಕರಾರುವಾಕ್ಕಾಗಿ ೩೭೨ ವರ್ಷಗಳ ಹಿಂದಷ್ಟೇ ಮಹಿಷಾಸುರನ ಪ್ರತಿಮೆಯನ್ನು ಸ್ಥಾಪಿಸಿದರು. ಅಂದರೆ, ೧೨ನೇ ಶತಮಾನದವರೆಗೂ ಮಯಿಸೂರಿಗೂ ಚಾಮುಂಡಿಗೂ ಯಾವುದೇ ಸಂಬಂಧವೂ ಇರಲಿಲ್ಲ. ಹಾಗೆಯೇ ಕೇವಲ ೩೭೦ ವರ್ಷಗಳ ಹಿಂದೆ ಮಹಿಷಾಸುರನಿಗೂ ಮಯಿಸೂರಿಗೂ ಕೂಡ ಸಂಬಂಧವಿರಲೇ ಇಲ್ಲ. ಕೇವಲ ೧೬ನೇ ಶತಮಾನದಿಂದೀಚೆಗಷ್ಟೇ ಮೈಸೂರನ್ನು `ಮಹಿಷೂರು’ ಅಂತ ಕರೆಯುವ ಪದ್ಧತಿ ಆರಂಭವಾಯಿತೆಂದು ಬಿ.ಎಲ್.ರೈಸ್ ಅವರೂ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದ ವಾಸ್ತವ ಹೀಗಿರುವಾಗ ಮೈಸೂರು ಎಂಬ ಊರಿನ ಅಸ್ತಿತ್ವವೇ ಇಲ್ಲದಿದ್ದ ಕ್ರಿ.ಪೂ. ೩ನೇ ಶತಮಾನದಲ್ಲೇ ಮಹಿಷಾಸುರ ಇಲ್ಲಿ ಪ್ರಬಲ ದ್ರಾವಿಡ ಸಾಮ್ರಾಜ್ಯ ಕಟ್ಟಿದನೆಂದೂ, ಆ ಕಾರಣದಿಂದಲೇ ಮಹಿಷೂರು > ಮೈಸೂರು ಎಂದಾಯಿತೆಂಬುದು ಎಷ್ಟರ ಮಟ್ಟಿಗೆ ಸರಿ? ಮಹಿಷಾಸುರನಿಗೆ ವೈದಿಕರು ದ್ರೋಹ ಬಗೆದದ್ದೇ ನಿಜವಾಗಿದ್ದಲ್ಲಿ ಮಹಿಷೂರಿಗೆ ಬದಲಾಗಿ ಈಗದು ಚಾಮುಂಡಿಪುರವಾಗಿರಬೇಕಿತ್ತಲ್ಲವೇ?
ಮಹಿಷ ಮಂಡಲ ಎಲ್ಲಿದೆ?
ಮೈಸೂರು ಕ್ರಿ.ಪೂ. ದಿಂದ ಹಿಡಿದು ಇತಿಹಾಸದಲ್ಲಿ ಎಂದೂ ಮಹಿಷಮಂಡಲವಾಗಿರಲೇ ಇಲ್ಲ. ನಿಜಕ್ಕೂ ಮಹಿಷಮಂಡಲವೆಂಬುದು ಯಾವುದು? ಅದು ಇರುವುದಾದರೂ ಎಲ್ಲಿ? ಪುರಾಣಗಳು ಹಾಗೂ ಐತಿಹಾಸಿಕ ದಾಖಲೆಗಳು ಈ ಬಗ್ಗೆ ವಿಪುಲ ಸಾಕ್ಷಾಧಾರಗಳನ್ನು ಒದಗಿಸಬಲ್ಲವು.
(ಎ) ಹರಿವಂಶವು ಮಾಹಿಷ್ಮತಿಯ ಸ್ಥಾಪಕನಾದವನು ಹೈಹಯ ವಂಶದ ಮಾಹಿಷ್ಮಂತ್ ಎಂಬಾತ ಎಂದು ದಾಖಲಿಸಿದೆ. ಹೈಹಯ ರಾಜವಂಶದವರು ಇತಿಹಾಸದಲ್ಲೆಂದೂ ಮೈಸೂರು ಪ್ರದೇಶವನ್ನು ಆಳಿದರೆಂಬುದಕ್ಕೆ ಯಾವ ಚಾರಿತ್ರಿಕ ದಾಖಲೆಗಳೂ ಇಲ್ಲ.
(ಬಿ) ಬೌದ್ಧ ಗ್ರಂಥ ದಿಗನಿಕಾಯವು ಮಾಹಿಷ್ಮತಿಯು ಆವಂತಿಯ ರಾಜಧಾನಿ ಎಂದು ಘೋಷಿಸುತ್ತದೆ. ಮಹಾ ಗೋವಿಂದ ಸುತ್ತಾಂತವು ಸಹ ಇದೇ ಮಾಹಿತಿ ನೀಡುತ್ತದೆ.
(ಸಿ) ಕಾಳಿದಾಸನ ರಘುವಂಶವು ಮಾಹಿಷ್ಮತಿಯು ನರ್ಮದಾ ನದಿಯ ದಂಡೆಯಲ್ಲಿದ್ದು ಅನುಪ ದೇಶದ ರಾಜಧಾನಿಯಾಗಿದೆ ಎನ್ನುತ್ತದೆ.
(ಡಿ) ಬೌದ್ಧ ಗ್ರಂಥ ಸುತ್ತನಿಪಾತವು ಭಿಕ್ಕುಗಳು ಪ್ರತಿಷ್ಠಾನದಿಂದ ಉಜ್ಜಯನಿಗೆ ಪ್ರಯಾಣಿಸಿದರೆ ಮಾಹಿಷ್ಮತಿಯು ಮಾರ್ಗಮಧ್ಯದಲ್ಲಿ ಸಿಗುತ್ತದೆ ಎಂದು ತಿಳಿಸುತ್ತದೆ.
(ಇ) ಬುದ್ಧಘೋಷನು ಈ ಮಾಹಿಷ್ಮತಿಯನ್ನು ಮಹಿಷಂ, ಮಾಹೀಷಕ ಮಂಡಲ ಎಂದು ಗುರುತಿಸಿದ್ದಾನೆ.
(ಎಫ್) ಹೈಹಯರ ರಾಜ ಕಾರ್ತವರರ್ಜುನನು ತನ್ನ ರಾಜಧಾನಿಯಾದ ಮಾಹಿಷ್ಮತಿಯಿಂದ ಇಡೀ ಪ್ರಪಂಚವನ್ನೇ ಆಳಿದ ಎಂಬ ಪುರಾಣದ ಮಾತನ್ನು ಪಿ.ಕೆ.ಭಟ್ಟಾಚಾರ್ಯರು ದಾಖಲಿಸಿದ್ದಾರೆ.
(ಜಿ) ಪತಂಜಲಿಯು ಪ್ರವಾಸಿಯೊಬ್ಬ ರಾತ್ರಿ ಉಜ್ಜಯಿನಿಯಿಂದ ಪ್ರಯಾಣ ಆರಂಭಿಸಿದಲ್ಲಿ ಆತನು ಮಾಹಿಷ್ಮತಿಯಲ್ಲಿ ಸೂರ್ಯೋದಯವನ್ನು ನೋಡಬಹುದು ಎಂಬ ವಿವರ ನೀಡುತ್ತಾನೆ.
(ಹೆಚ್) ಪರಮಾರದ ದೊರೆ ದೇವಪಾಲ ತನ್ನ ಮಾಂಧಾತ ಶಾಸನದಲ್ಲಿ ತಾನು(ಕ್ರಿ.ಶ.೧೨೨೫) ಮಾಹಿಷ್ಮತಿಯಲ್ಲಿ ತಂಗಿರುವಾಗ ಬ್ರಾಹ್ಮಣನೊಬ್ಬನಿಗೆ ಗ್ರಾಮವೊಂದನ್ನು ದಾನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
(ಐ) ಸಾಂಚಿಯಲ್ಲಿನ ಶಾಸನವೊಂದು ಮಾಹಿಷ್ಮತಿಯ ಯಾತ್ರಾರ್ಥಿಗಳು ಸಾಂಚಿಸ್ತೂಪಕ್ಕೆ ಭೇಟಿ ನೀಡಿದರೆಂದು ಉಲ್ಲೇಖಿಸಿದೆ.
(ಜೆ) ಬೌದ್ಧ ಧರ್ಮದ ಸರ್ವಾಸ್ತಿವಾದದಿಂದ ೫ ಕುಡಿಯೊಡೆದ ಮಹೀಷಾಸಕ ಶಾಖೆಯು ಹುಟ್ಟಿದ್ದೇ ಆವಂತಿ ಪ್ರದೇಶದಲ್ಲಿನ ಮಾಹಿಷ್ಮತಿಯಲ್ಲಿ. ನಂತರ ಅದು ಆಂಧ್ರಪ್ರದೇಶದಲ್ಲೂ ಹಬ್ಬಿ, ಅಲ್ಲಿ ಮಾಹೀಷ್ಮಕ ಮಂಡಳ ಎಂಬ ಪ್ರದೇಶವಿತ್ತು ಎಂಬುದಾಗಿ ಪಾಲಿ-ಆಂಗ್ಲ ನಿಘಂಟಿನಲ್ಲಿ ಉಲ್ಲೇಖಿಸಲಾಗಿದೆ.
ಪಿ.ಕೆ. ಭಟ್ಟಾಚಾರ್ಯ ಎಂಬ ವಿದ್ವಾಂಸರು ` Historical geography of Madhya pradesh : from early records’ ಎಂಬ ತಮ್ಮ ಸಂಶೋಧನಾ ಗ್ರಂಥದಲ್ಲಿ ತುಂಬಾ ಸ್ಪಷ್ಟವಾಗಿ ಮಹಿಷಮಂಡಲ ಅಥವ ಮಾಹಿಷ್ಮತಿ ಎಂಬ ನಗರವು ಆವಂತಿ ರಾಜ್ಯದಲ್ಲಿತ್ತು ಎಂದಿರುವರಲ್ಲದೆ ವಿಂಧ್ಯ ಪರ್ವತಗಳ ಉತ್ತರಕ್ಕೆ ಉಜ್ಜಯಿನಿಯೂ ಮತ್ತು ದಕ್ಷಿಣಕ್ಕೆ ಮಾಹಿಷ್ಮತಿಯೂ ಇರುವುದಾಗಿ ಹೇಳಿದ್ದಾರೆ. ಜೊತೆಗೆ ನರ್ಮದಾ ನದಿಯ ದಂಡೆಯ ಮೇಲಿದೆ ಎಂದು ನಿಖರ ಮಾಹಿತಿ ನೀಡಿದ್ದಾರೆ. ಇಂದಿಗೂ ಮಾಹಿಷ್ಮತಿ ನಗರವು ತನ್ನ ಪ್ರಾಚೀನ ಕೋಟೆ, ಅರಮನೆಗಳೊಂದಿಗೇ ಮಾಹೇಶ್ವರ ಎಂಬ ಹೆಸರಿನ ನಗರವಾಗಿಯೇ ಉಳಿದಿದೆ. ಪ್ರಾಚೀನ ಭಾರತದ ನಕ್ಷೆಗಳಲ್ಲಿಯೂ ಮಾಹಿಷ್ಮತಿ ನಗರವನ್ನು ನರ್ಮದೆ ನದಿಯ ದಂಡೆಯ ಮೇಲೇ ಗುರುತಿಸಲಾಗಿರುವುದನ್ನು ಕೂಡ ಗಮನಿಸಬಹುದು. ಇಷ್ಟೆಲ್ಲಾ ದಾಖಲೆ, ಆಧಾರಗಳಿದ್ದರೂ ದಕ್ಷಿಣದ ಮೈಸೂರನ್ನೇ ಮಹಿಷಮಂಡಲ ಅಂತ ಕರೆವ ಅಥವ ಗುರುತಿಸುವ ತಪ್ಪು ಹೇಗೆ ನಡೆಯಿತು? ಈ ಅನಾಹುತಕ್ಕೆ ಕಾರಣವಾದದ್ದು ಕೇವಲ ಬಿ.ಎಲ್.ರೈಸ್ ಅವರ ಒಂದು ತಪ್ಪು ಗ್ರಹಿಕೆಯೇ.
ಮಹಾಭಾರತದಲ್ಲಿ `ಸಹದೇವ ಕಾವೇರಿ ನದಿಯನ್ನು ದಾಟಿ ಮಾಹಿಷ್ಮತಿ ನಗರವನ್ನು ತಲುಪಿದ’ ಎಂಬ ಮಾತಿದೆ. ಕಾವೇರಿ ನದಿಯ ಉಲ್ಲೇಖವನ್ನಷ್ಟೇ ಗಮನಿಸಿದ ಬಿ.ಎಲ್.ರೈಸ್ ಅವರು ಕೂಡಲೇ ಹಿಂದುಮುಂದು ಯೋಚಿಸದೆ ಕಾವೇರಿ ನದಿಯ ಬಳಿ ಇರುವ ಮೈಸೂರನ್ನೇ ಮಹಿಷಮಂಡಲ ಎಂದು ಗುರುತಿಸಿಬಿಟ್ಟರು. ಬಿ.ಎಲ್. ರೈಸರ ಈ ಪ್ರಮಾದವೆಂಬಂತಹ ತಪ್ಪುಗ್ರಹಿಕೆಯೇ ಇತಿಹಾಸದಲ್ಲಿ ಮುಂದುವರೆದುಕೊಂಡು ಬಂದ್ದದ್ದರ ಫಲವೇ ಮಹಿಷೂರು, ಮಹಿಷ ದಸರ ಇತ್ಯಾದಿಗಳು. ಪಿ.ಕೆ. ಭಟ್ಟಾಚಾರ್ಯರು ರೈಸರ ಈ ತಪ್ಪು ಗ್ರಹಿಕೆಯನ್ನು ಸರಿಪಡಿಸುತ್ತಾ, `ದಕ್ಷಿಣದಲ್ಲಿ ಕಾವೇರಿ ನದಿ ಇರುವುದೆಂಬ ಮಾತು ನಿಜವಾದರೂ, ನರ್ಮದಾ ನದಿಗೂ ಕಾವೇರಿ ಎಂಬ ಹೆಸರಿನ ಉಪನದಿಯೊಂದಿದ್ದು, ಅದು ಮಾಂಧಾತ ಎಂಬಲ್ಲಿ ನರ್ಮದಾ ನದಿಯನ್ನು ಕೂಡುತ್ತದೆ; ಸಹದೇವ ದಾಟಿದ್ದು ಈ ಕಾವೇರಿ ನದಿಯನ್ನೇ; ಯಾಕೆಂದರೆ ಆಗ ಮಾಹಿಷ್ಮತಿಯ ರಾಜನಾಗಿದ್ದ ನೀಲನನ್ನು (ಈತ ಅಗ್ನಿದೇವನ ಮಾವ) ಸೋಲಿಸಿದ ಸಹದೇವ ಸಮೀಪದಲ್ಲಿದ್ದ ಸೌರಾಷ್ಟçದತ್ತ(ಗುಜರಾತ್) ತೆರಳಿದ ಎಂಬ ಮುಂದುವರೆದ ಮಾತು ಮಹಾಭಾರತದಲ್ಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿ.ಎಲ್.ರೈಸರ ತಪ್ಪು ಗ್ರಹಿಕೆಯಿಂದಷ್ಟೇ ಮೈಸೂರು ಮಹಿಷಮಂಡಲವಾಯಿತೇ ಹೊರತು, ಇಂದಿಗೂ ಮಾಹಿಷ್ಮತಿ ಯಾ ಮಹಿಷಮಂಡಲವು ಮಾಹೇಶ್ವರವೆಂಬ ಬದಲಾದ ಹೆಸರಿನೊಂದಿಗೆ ಮಧ್ಯಪ್ರದೇಶದ ಉತ್ತರ ಭಾಗದಲ್ಲಿನ ನರ್ಮದಾ ನದಿಯ ದಂಡೆಯಲ್ಲೇ ಇದೆ. ಇಲ್ಲೇ ಸ್ಪಷ್ಟಪಡಿಸಬೇಕಾದುದೇನೆಂದರೆ ಈ ಐತಿಹಾಸಿಕ ಪ್ರಮಾದದೊಂದಿಗೆ ಮೈಸೂರನ್ನು ಆಳಿದ ವಿವಿಧ ರಾಜವಂಶಗಳವರ ಕಾಕತಾಳೀಯವೆಂಬಂತಹ ಕೊಡುಗೆಗಳು ಕೂಡ ಮೇಳೈಸಿ ತಪ್ಪುಗ್ರಹಿಕೆಗೆ ಮತ್ತಷ್ಟು ಬಲ ಕೂಡುವಂತಾಯಿತು.
ಕ್ರಿ.ಶ.೯೫೦ರ ಸುಮಾರಿಗೇ ಮಹಾಬಲಾದ್ರಿ ಬೆಟ್ಟದಲ್ಲಿ (ಈಗದು ಚಾಮುಂಡಿಬೆಟ್ಟ) ಶಿವನ ಮಹಾಬಲೇಶ್ವರ ದೇವಾಲಯವಿತ್ತಷ್ಟೆ. ಹೊಯ್ಸಳರು ಶಿವನ ಹೆಂಡತಿ ಪಾರ್ವತಿಯ ಶಕ್ತಿರೂಪವೇ ಚಾಮುಂಡಿಯಾದ್ದರಿಂದ, ಶಿವದೇವಾಲಯದ ಪಕ್ಕ ಚಾಮುಂಡಿಯ ದೇವಾಲಯವಿರುವುದು ಸರಿಯೆಂಬ ನಿರ್ಧಾರದೊಂದಿಗೆ ಚಾಮುಂಡಿಯ ಸಣ್ಣ ದೇವಾಲಯ ನಿರ್ಮಿಸಿದರು. ಕ್ರಿ.ಶ.೧೬೫೦ರಲ್ಲಿ ದೊಡ್ಡ ದೇವರಾಜ ವಡೆಯರು ಪಾರ್ವತಿಯ ಎಲ್ಲಾ ಶಕ್ತಿರೂಪಗಳನ್ನೂ ಸಮಾನವೆಂಬಂತೆ ನೋಡುವ ಪರಿಪಾಠ ರೂಢಿಯಲ್ಲಿದ್ದುದ್ದರಿಂದ, ಬಹುಶಃ ಚಾಮುಂಡಿಯನ್ನೇ ಮಹಿಷಾಸುರ ಮರ್ದಿನಿ ಎಂದು ಭಾವಿಸಿ ಅದೇ ಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆಯನ್ನು ನಿಲ್ಲಿಸಿದರು. ಬಿ.ಎಲ್.ರೈಸರ ತಪ್ಪು ಗ್ರಹಿಕೆಯ ಪ್ರಮಾದಕ್ಕೆ ಹೊಯ್‌ಕೈಯ್ಯಾಗಿ ದೊಡ್ಡ ದೇವರಾಜ ವಡೆಯರ ತಪ್ಪು ಗ್ರಹಿಕೆಯೂ ಸೇರಿ ಇತಿಹಾಸದ ಅಪಚಾರ ಸರಣಿ ಮುಂದುವರೆಯಿತೆನ್ನಬಹುದು. ಯಾಕೆಂದರೆ, ಪುರಾಣಗಳ ಪ್ರಕಾರ ಮಹಿಷಾಸುರನನ್ನು ಕೊಂದದ್ದು ದುರ್ಗಿಯೇ ಹೊರತು ಚಾಮುಂಡಿಯಲ್ಲ. ಇಂದಿಗೂ ನವರಾತ್ರಿಯಂದು ಪಶ್ಚಿಮ ಬಂಗಾಳದಲ್ಲಿ ನಡೆಯವುದು ದುರ್ಗಿ ಪೂಜೆಯೇ ಹೊರತು ಚಾಮುಂಡಿ ಪೂಜೆಯಲ್ಲ. ಚಂಡ-ಮುಂಡರನ್ನು ಚಾಮುಂಡಿ ವಧಿಸಿದಳೇ ಹೊರತು, ಮಹಿಷಾಸುರನನ್ನು ವಧಿಸಿದ ಪುರಾಣೋಲ್ಲೇಖವೆಲ್ಲೂ ದೊರೆಯುವುದಿಲ್ಲ. ಪಾರ್ವತಿಯ ಇನ್ನಿತರ ಶಕ್ತಿರೂಪಿಣಿ ಅವತಾರಗಳಾದ ಕಾಳಿ, ತಾರಾ, ತ್ರಿಪುರ ಸುಂದರಿ, ಭೈರವಿ ಅಥವ ಮಾತಂಗಿಯನ್ನೋ ಮಹಿಷಾಸರ ಮರ್ದಿನಿಯರೆನ್ನಲಾದೀತೇ? ಚಾಮುಂಡಿಯಾದರೂ ಅಷ್ಟೇ ತಾನೇ? ಆದರೂ ದೊಡ್ಡ ದೇವರಾಜ ವಡೆಯರ ಶಕ್ತಿ ಸ್ವರೂಪಿಣಿ ದೇವಿಯರ ಕುರಿತ ಸಾಮಾನ್ಯ ಗ್ರಹಿಕೆಯೇ ಜನಮಾನಸದಲ್ಲೂ ಬಲವಾಗಿ ಬೇರೂರಿರುವುದರಿಂದ ಕಾಳಿ, ಚಂಡಿಕಾ, ಚಾಮುಂಡಿ, ದುರ್ಗಿಯರನ್ನೆಲ್ಲಾ ಸಮಾನ ಭಾವ - ಗ್ರಹಿಕೆಯಿಂದಲೇ ನೋಡುವ ಪರಿಪಾಟವೂ ಮುಂದುವರೆಯುತ್ತಲೇ ಬಂದಿದೆ.
ಮಹಿಷಾಸುರ ಮತ್ತು ಬೌದ್ಧ ಧರ್ಮ :
ಕ್ರಿ.ಪೂ.೨೫೦ರ ಆಸುಪಾಸಲ್ಲಿ ಅಶೋಕ ಸಾಮ್ರಾಟರು ಮಹದೇವ ತೇರಾನನ್ನು (ಈತ ನಾಲ್ಕು ಕೊಲೆಗಳನ್ನು ಮಾಡಿ ಪಶ್ಚಾತ್ತಾಪಗೊಂಡು ಬೌದ್ಧನಾದವನು) ಮಹಿಷಮಂಡಲಕ್ಕೂ ಹಾಗೂ ರಖ್ಖಿತ ಎಂಬ ಭಿಕ್ಕುವನ್ನು ಬನವಾಸಿಗೂ ಬೌದ್ಧ ಧರ್ಮವನ್ನು ಪ್ರಸಾರ ಮಾಡಲೆಂಬ ಉದ್ದೇಶದೊಂದಿಗೆ ಕಳುಹಿಸಿದರು ಎಂಬ ಮಾಹಿತಿ ಶ್ರೀಲಂಕಾದ ಬೌದ್ಧ ಗ್ರಂಥವಾದ ಮಹಾವಂಶದಲ್ಲಿ ನಿರೂಪಿಸಲ್ಪಟ್ಟಿದೆ. (ಪುಟ-೩೫೧). ಆದರೆ ಮಹದೇವ ತೇರಾ ಹೋದದ್ದು ನರ್ಮದಾ ನದಿ ದಂಡೆಯಲ್ಲಿದ್ದ ಮಹಿಷಮಂಡಲಕ್ಕೇ. ಮಹದೇವನನ್ನು ಮಹಿಷಮಂಡಲಕ್ಕೆ ಕಳುಹಿಸುವಂತೆ ಶಿಫಾರಸು ಮಾಡಿದವಳು ಅಶೋಕನ ಪಟ್ಟ ಮಹಿಷಿಯಾಗಿದ್ದ ವಿದಿಶಾದೇವಿ ಶಾಕ್ಯ ಕುಮಾರಿಯೇ ಎಂಬ ಮಾಹಿತಿ ಕೂಡ ಮಹಾವಂಶದಲ್ಲೇ ಉಲ್ಲೇಖಿಸಲ್ಪಟ್ಟಿದೆ. ಸಾಂಚಿ ಸ್ತೂಪದ ನಿರ್ಮಾಣವಾದದ್ದೂ ಈಕೆಯ ಸಲಹೆಯಿಂದಲೇ, ಇರಲಿ. ಈ ವಿದಿಶಾದೇವಿಯು ಮೂಲತಃ ಶಾಕ್ಯ ವಂಶಸ್ಥಳೇ. ಕೋಸಲ ಸಾಮ್ರಾಜ್ಯದ ವಿಡೂಡಭ ಶಾಕ್ಯರನ್ನೆಲ್ಲ ಹೊಸಕಿ ಹಾಕುವಾಗ, ಅವನ ಹೆದರಿಕೆಯಿಂದ ವಿದಿಶಾದೇವಿಯ ಪೂರ್ವೀಕರು ಕಪಿಲವಸ್ತುವನ್ನು ತೊರೆದು, ನರ್ಮದಾ ನದಿ ದಂಡೆಯ ಮಹಿಷಮಂಡಲಕ್ಕೆ ಬಂದು ನೆಲೆಸಿದ್ದರು. (ರಾಧಾ ಕುಮುದ್ ಮುಖರ್ಜಿ). ಈ ಮಹಿಷಮಂಡಲದಲ್ಲಿ ದಂಗೆಯೆದ್ದಾಗ, ಬಿಂದುಸಾರ ಅಶೋಕನನ್ನು ದಂಗೆಯಡಗಿಸಿ ಬರುವಂತೆ ಮಹಿಷಮಂಡಲಕ್ಕೆ ಕಳುಹಿಸುತ್ತಾನೆ. ಈ ಸಂದರ್ಭದಲ್ಲೇ ಅಶೋಕನಿಗೆ ವಿದಿಶಾದೇವಿ ಪರಿಚಯವಾಗಿ ಪ್ರೇಮಾಂಕುರವಾದದ್ದು. ಈಕೆಯ ಮಕ್ಕಳೇ ಮಹೇಂದ್ರ ಮತ್ತು ಸಂಘಮಿತ್ರ. ವಂಶಮೂಲದಿಂದಲೇ ಬೌದ್ಧಳಾಗಿದ್ದ ವಿದಿಶಾದೇವಿ ತನ್ನ ತವರೂರಲ್ಲಿ ಬೌದ್ಧ ಧರ್ಮ ಹಬ್ಬಲಿ ಎಂಬ ಉದ್ದೇಶದಿಂದಲೇ ಮಹದೇವ ತೇರಾನನ್ನು ಮಹಿಷಮಂಡಲಕ್ಕೆ ಕಳುಹಿಸಿದ್ದು. ಕೆಲಕಾಲ ನಂತರ ಮಹದೇವ ತೇರಾ ಪುನಃ ಪಾಟಲೀಪುತ್ರಕ್ಕೇ ವಾಪಸ್ಸಾದದ್ದಲ್ಲದೇ ಬೌದ್ಧ ಇತಿಹಾಸದಲ್ಲಿ ಮೊದಲ ಬಾರಿಗೆ ಬೌದ್ಧ ಧರ್ಮವನ್ನು ವಿಭಜಿಸಿದ ಕುಖ್ಯಾತಿಗೂ ಒಳಗಾದ. `ಮಹಾಸಾಂಘಿಕ’ ಶಾಖೆ ಈತನದ್ದೇ Brain Child!
ಮಹದೇವ ತೇರಾ ಮೈಸೂರಿನ ಮಹಿಷಮಂಡಲಕ್ಕೂ ಬಂದಿದ್ದನೆಂಬ ಮಾತನ್ನೂ ಈಗ ಒಂದಿಷ್ಟು ಪರಿಶೀಲಿಸುವ: ಮೊದಲನೆಯದಾಗಿ ಮಹದೇವ ಕರುಣಾಮೈತ್ರಿಯ ಸಂದೇಶದ ಬೌದ್ಧ ಪ್ರಚಾರಕನಾಗಿಯೇ ತಾನೆ ಮೈಸೂರಿಗೆ ಬಂದಿದ್ದದ್ದು? ಅದನ್ನು ಬಿಟ್ಟು ಆತ ರಾಜ್ಯವನ್ನೇಕೆ ನಿರ್ಮಿಸಿದ? ಮತ್ತು ರಾಜ್ಯ ಸ್ಥಾಪಿಸಿದ್ದಾದರೂ ಎಲ್ಲಿ? ಯಾಕೆಂದರೆ ಕ್ರಿ.ಪೂ. ೩ನೇ ಶತಮಾನದಲ್ಲಿ ಈ ಭಾಗದಲ್ಲಿ ಪುನ್ನಾಟರು ರಾಜ್ಯವಾಳುತ್ತಿದ್ದರೆಂಬ ವಿವರವಾದ ಅಂಶಗಳನ್ನು ಈಗಾಗಲೇ ಗಮನಿಸಿದ್ದೇವಲ್ಲ? ಪುನ್ನಾಟರನ್ನೀತ ಬದಲಿಸಿದ್ದಲ್ಲಿ ಆ ನಂತರವೂ ಅಲ್ಲೇ ಪುನ್ನಾಟರು ಮುಂದುವರೆದದ್ದಾದರೂ ಹೇಗೆ? ಇರಲಿ, ಮಹದೇವ ಸ್ಥಾಪಿಸಿದ ರಾಜ್ಯದ ರಾಜವಂಶದ ಹೆಸರೇನಾಗಿತ್ತು? ಮಹದೇವನ ನಂತರ ಅದು ಮುಂದುವರೆಯಿತೇ ಅಥವ ಇಲ್ಲವೇ? ಇಲ್ಲವೆಂದಾದರೆ ಯಾಕೇ? ಮುಂದುವರೆದಿದ್ದ ಪಕ ್ಷದಲ್ಲಿ ಅದು ಕರ್ನಾಟಕದ ಇತಿಹಾಸದಲ್ಲಿ ದಾಖಲಾಗಲೇ ಇಲ್ಲವೇಕೆ? ಮಹದೇವ ಅನೇಕ ಆರ್ಯಾವರ್ತದ ರಾಜರನ್ನೆಲ್ಲ ಸೋಲಿಸಿ ಬಲಿಷ್ಠ ದ್ರಾವಿಡ ಸಾಮ್ರಾಜ್ಯವನ್ನು ಕಟ್ಟಿದನೆಂಬ ಮಾತೂ ಇದೆಯಲ್ಲವೇ? ಯಾವ ಆರ್ಯ ರಾಜರನ್ನೀತ ಸೋಲಿಸಿದ?! ಯಾಕೆಂದರೆ ಕಂದಹಾರ್‌ನಿಂದ ಹಿಡಿದು ಬಾಂಗ್ಲಾದವರೆಗೂ ಹಾಗೂ ಉತ್ತರ ತುದಿಯಿಂದ ಹಿಡಿದು ಉತ್ತರ ಕರ್ನಾಟಕದವರೆಗೂ ವಿಶಾಲವಾಗಿ ವ್ಯಾಪಿಸಿದ್ದದ್ದು ಅಶೋಕನ ಮೌರ್ಯ ಸಾಮ್ರಾಜ್ಯವೊಂದೇ. ದಕ್ಷಿಣದಲ್ಲಿದ್ದದ್ದು ಚೋಳ, ಚೇರ, ಪಾಂಡ್ಯರಂತಹ ದ್ರಾವಿಡ ರಾಜ್ಯಗಳೇ. ಹೀಗಿರುವಾಗ ಮಹದೇವ ಆಗ ಅಧಿಕಾರದಲ್ಲಿದ್ದ ಏಕೈಕ ಆರ್ಯ ರಾಜನಾದ ಅಶೋಕನ ವಿರುದ್ಧವಷ್ಟೇ ಯುದ್ಧ ಮಾಡಲು ಸಾಧ್ಯವಿದ್ದದ್ದು! ಇದು ಅಸಂಭವದಲ್ಲಿ ಅಂಸಭವ. ಅದಿರಲಿ, ಪಾಟಲೀಪುತ್ರದ ಆರ್ಯ ಕುಲೀಯ ವ್ಯಾಪಾರೀ ಮನೆತನದ ಮಹದೇವ ಯಾವಾಗ ಮತ್ತು ಹೇಗೆ ದ್ರಾವಿಡನಾದ?! ಅಹಿಂಸಾ ತತ್ವದ ಈತ ಹಿಂಸಾತ್ಮಕ ಯುದ್ಧ ಮಾಡಿದ್ದನ್ನಾದರೂ ಕಲ್ಪಿಸಿಕೊಳ್ಳುವುದು ಸಾಧ್ಯವೇ? ಈ ಅಂಶಗಳು ನಿಜವೇ ಆಗಿದ್ದಲ್ಲಿ ಎಲ್ಲೂ ಯಾಕೆ ಚಾರಿತ್ರಿಕ ನೆಲೆಗಳಲ್ಲಿ ದಾಖಲಾಗಿಲ್ಲ?
ಆರ್ಯ ದಾಯಾದಿ ಮತ್ಸರದ ಮಹಿಷ ಪುರಾಣ:
ಆರ್ಯ ಪಾರ್ಸಿಗಳು ಮತ್ತು ಆರ್ಯ ವೈದಿಕರು ಯುರೇಷಿಯಾದಿಂದ ಒಟ್ಟಿಗೇ ಇರಾನ್‌ವರೆಗೂ ವಲಸೆ ಹೊರಟು ಬಂದ ಇಂಡೋ-ಯೂರೋಪಿಯನ್ನರು. ಕಳ್ಳುಬಳ್ಳಿಯ ದಾಯಾದಿ ಸಂಬಂಧಿಗಳು. ಇರಾನಿಗೆ (ಅಂದಿನ ಪರ್ಷಿಯ) ಬಂದ ನಂತರ ಝೊರಾಷ್ಟಿçಯನ್ ಪಾರ್ಸಿಗಳು ರಾಜ್ಯ ಸ್ಥಾಪನೆಯೊಂದಿಗೆ ತಮ್ಮ ಪ್ರದೇಶವನ್ನು ಆರ್ಯನ್ ವೇಜû (ಆರ್ಯರ ತವರು ಭೂಮಿ) ಅಂತ ಕರೆದುಕೊಂಡರು. ಅದನ್ನು ತಮ್ಮದಾಗಿಸಿಕೊಳ್ಳಲು ವೈದಿಕರು ಪ್ರಯತ್ನಿಸಿದರು. ಪರ್ಷಿಯನ್ ಕವಿ ಫಿರ್ದೋಸಿಯ ಷಾಹೆನಾಮದ ಪ್ರಕಾರ ಪಾರ್ಸಿ ಮತ್ತು ವೈದಿಕರು ಎರಡು ಯುದ್ಧಗಳನ್ನು ಮಾಡಿದರು. ಪರ್ಷಿಯಾದ ಗಯ ಮರಿತಾನ್ ಎಂಬ ರಾಜನ ಮಗನಾದ ಸಿಯಾಮಕ್ ಎಂಬುವವನ್ನು ವೈದಿಕ ಸೇನೆಯ ಸೇನಾನಿಯಾಗಿದ್ದ ಅರ್ಹಿಮನ್‌ನ ಮಗ ಕೊಂದ. ವೈದಿಕರು ಮೊದಲ ಯುದ್ಧದಲ್ಲಿ ವಿಜಯಿಗಳಾದರು. ಪುನಃ ಗಯಾ ಕೆಲಕಾಲಾನಂತರ ತನ್ನ ಮೊಮ್ಮಗ ಹುಷಂಗ್‌ನ ನೇತೃತ್ವದಲ್ಲಿ ಬೃಹತ್ ಸೇನೆಯನ್ನು ಜಮಾವಣೆಗೊಳಿಸಿ ವೈದಿಕರನ್ನು ಸೋಲಿಸಿದ್ದಲ್ಲದೆ ಹರಪ್ಪ ನಾಗರಿಕತೆಯವರೆಗೂ ಬೆನ್ನಟ್ಟಿ ಓಡಿಸಿದ. ಈ ಎರಡನೇ ಯುದ್ಧದಲ್ಲಿ ವೈದಿಕರೇ ಗೆದ್ದಿದ್ದರೆ, ಬಹುಶಃ ಇಂದು ಈ ದೇಶದ ಹೆಸರೇ ಬೇರೆ ಇರುತ್ತಿತ್ತು. ಇಲ್ಲಿ ವೈದಿಕ ಬ್ರಾಹ್ಮಣರು, ಅವರ ಧರ್ಮ, ಜಾತಿ ಇತ್ಯಾದಿಗಳು ಯಾವುವೂ ಇರುತ್ತಿರಲೇ ಇಲ್ಲ! ಇತಿಹಾಸದ ಆಕಸ್ಮಿಕದಿಂದ ನಾವಿಂದು ಈ ಪರಿಸ್ಥಿತಿಗೆ ದೂಡಲ್ಪಟ್ಟಿದ್ದೇವೆ. ಜಾರತೂಷ್ಟ ವೈದಿಕರ ಅಪ್ರಮಾಣಿಕತೆ, ಹಿಂಸೆ, ಸ್ವಾರ್ಥ ಮತ್ತು ನೀತಿರಾಹಿತ್ಯತೆಗಳನ್ನು ಕಂಡು ಜಿಗುಪ್ಸೆಗೊಂಡು ನೈತಿಕ ನಿಯಮಗಳೇ ಪ್ರಧಾನವಾದ ಮಜ್ದಾಯಸ್ನಿಯನ್ನು ಬೋಧಿಸಿ ಝೊರಾಷ್ಟಿçಯನ್ ಧರ್ಮವನ್ನು ಸ್ಥಾಪಿಸಿದ. ಇತ್ತ ಪುರುಗಳ ಉಪಪಂಗಡವಾದ ಭರತರ ಕುರುಶ್ರವಣ ಹರ್ಯಾಣದಲ್ಲಿ ಮೊಟ್ಟಮೊದಲಿಗೆ ತನ್ನ ಆರ್ಯ ರಾಜ್ಯವನ್ನು ಸ್ಥಾಪಿಸಿದ. ಅದುವೇ ಕುರುಕ್ಷೇತ್ರ. ಬಹುಶಃ ಭರತರಿಂದಲೇ ಭಾರತ ಎಂದಾದದ್ದು. ನಂತರ ಆರ್ಯ ವೈದಿಕರು ಗಂಗಾನದಿ ಬಯಲನ್ನೊಳಗೊಂಡಂತೆ ಆರ್ಯಾವರ್ತ, ಅಂದರೆ `ಆರ್ಯರ ಭೂಮಿಯನ್ನು ಸ್ಥಾಪಿಸಿಕೊಂಡರು. ಪಾರ್ಸಿಗಳು ಭಾರತದ ಆರ್ಯರನ್ನು ವೈದೀಹರು ಅಂತಲೇ ಕರೆದರು. ಇಲ್ಲಿಂದಾಚೆಗೆ ಈ ದಾಯಾದಿಗಳ ನಡುವೆ ಏತಿ ಅಂದರೆ ಪ್ರೇತಿ ಅನ್ನುವಂತಾಯಿತು.
ಋತದ (ಸತ್ಯ) ಅಧಿದೇವ ಹಾಗೂ ಅಸುರರ ನಾಯಕನೂ ಆದ ವರುಣನನ್ನೇ ಪಾರ್ಸಿಗಳು ತಮ್ಮ ಏಕೈಕ ಸರ್ವಶಕ್ತನೆಂದು ಅಂಗೀಕರಿಸಿದರು. ಭೃಗು-ಅಂಗೀರಸ ಸಂಹಿತೆಯಲ್ಲಿನ ತಮಗೆ ಬೇಕಾದ ಸದಾಚಾರಗಳನ್ನು ಪ್ರತ್ಯೇಕಿಸಿ ಅದನ್ನು ಭಾರ್ಗವ ವೇದ ಅಂತ ಕರೆದು ಅದನ್ನೇ ಅವೆಸ್ತಾವನ್ನಾಗಿ ರೂಪಿಸಿಕೊಂಡು. ಉಳಿದರ್ಧವೇ ಆಥರ್ವವೇದ. ಇದಕ್ಕೆ ವಿರುದ್ಧವಾಗಿ ವೈದಿಕರು ಅಂಗೀರಸ ಪರಂಪರೆಯನ್ನೇ ಇಂದ್ರ ಮತ್ತು ದೇವ ಪರಿಕಲ್ಪನೆಯ ಮೂಲಕ ಮುಂದುವರೆಸಿದರು. ಹೀಗಾಗಿಯೇ ಪಾರ್ಸಿಗಳ ಪ್ರಕಾರ ದಏವ(ದೇವ) ಅಂದರೆ ಕೆಡುಕಿನ ದುಷ್ಟಶಕ್ತಿ. ಅಹುರ(ಅಸುರ)ನೇ ಸರ್ವಶಕ್ತ. ಆದರೆ ವೈದಿಕರು ಪೂರ್ವದೇವರಾದ ಅಸುರರನ್ನೇ ದುಷ್ಟಶಕ್ತಿಗಳೆಂದೂ, ದೇವನೇ ಸರ್ವಶಕ್ತನೆಂದೂ ಅಂಗೀಕರಿಸಿದರು. ಭೃಗುವಿನ ಮಗನಾದ ಶುಕ್ರಾಚಾರ್ಯ ಪಾರ್ಸಿ ಅಸುರರ ಗುರುವಾದ. ಅಂಗೀರಸನ ಮಗನಾದ ಬೃಹಸ್ಪತಿ ವೈದಿಕ ದೇವರ ಗುರುವಾದ. ವೈದಿಕ ಪುರಾಣಗಳಲ್ಲೂ ಈ ಅಂಶವೇ ಉಳಿದು ಬಂದಿರುವುದನ್ನು ಗಮನಿಸಬಹುದು. ಇಷ್ಟಾದರೂ ಅಸುರರು ದೇವರುಗಳಿಗಿಂತಲೂ ಪ್ರಾಚೀನರು ಮತ್ತು ಹೆಚ್ಚು ಸಮರ್ಥರು. ಅಸುರರು ಪೂರ್ವ ದೇವರು. ಅಸುರ ಪದ ಸುರ ಪದಕ್ಕೆ ವಿರುದ್ಧ ಪದವಲ್ಲ. ನಕಾರಾತ್ಮಕ `ಅ’ ಎಂಬ ಆದಿ ಪ್ರತ್ಯಯ ಈ ಪದದಲ್ಲಿದ್ದರೂ ಇಲ್ಲಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅದರ ಮೂಲ ಹಸುರ (Hasura) ಎಂಬ ಪದವಾಗಿದ್ದು ಅದು ಆದಿಮ ಇಂಡೋ-ಯೂರೋಪಿಯನ್ ಭಾಷೆಯಲ್ಲಿದೆ. ಹಸು > ಅಸು ಎಂದರೆ ಪ್ರಾಣ ಎಂದರ್ಥ. ಸತ್ತ ನಂತರ ಜೀವದ ರಕ್ಷಣೆ, ಉಸ್ತುವಾರಿ ವಹಿಸಿಕೊಳ್ಳುವವರೇ ಅಸುರರು. (ಮೋನಿಯರ್ ವಿಲಿಯಂಸ್) ಅಸುರನಾದ ವರುಣನ ಬಗ್ಗೆ `ದೇವರು ಮತ್ತು ಮರ್ತ್ಯರೆಲ್ಲರಿಗೂ ವರುಣನೇ ಅಧಿಪತಿ’ (ಋಗ್ವೇದ, ೧೧.೨೭.೧೦) ಎಂದು ಋಗ್ವೇದವೇ ವರ್ಣಿಸಿದೆ. `ಈ ಅಸುರ (ವರುಣ) ದೇವರುಗಳನ್ನೂ ನಿಯಂತ್ರಿಸಬಲ್ಲ’ (ಅಥರ್ವ, ೧.೧೦.೧). ಬರ್ಯಾವುದೇ ವೈದಿಕ ದೇವರಿಗೂ ಈ ಬಗೆಯ ಪ್ರಾಮುಖ್ಯತೆ ಸಿಕ್ಕಿಲ್ಲ. `ಮಹಸ್ ಪುತ್ರಾಸೋ ಅಸುರಸ್ಯ ವೀರಾ:’ (ಋಗ್ವೇದ, ೧೦.೧೦.೧೨) ಎಂದು ಅಸುರರ ಮಹತ್ತು, ವೀರತ್ವವನ್ನೂ ಪ್ರಶಂಸಿಸಲಾಗಿದೆ. ವಿ-ದೇವ್-ದಾತ, ಅಂದರೆ ದೇವರುಗಳ ವಿರುದ್ಧದ ನಿಯಮ/ ಕಾನೂನುಗಳು ಎಂಬರ್ಥದ ವೆಂಡಿಡ್ಯಾಡ್ (Vendidad) ಪಾರ್ಸಿಗಳ ಪವಿತ್ರ ಗ್ರಂಥಗಳಲ್ಲೊಂದು. ಇದರಲ್ಲಿ ಅಹುರ್‌ಮಜ್ದಾ `ನಾನು ಇಂದ್ರನನ್ನು ಓಡಿಸಿದೆ. ನಾನು ದಏವ(ದೇವ)ನನ್ನು ಈ ತವರು ನೆಲದಿಂದ, ಈ ಭೂಮಿಯಿಂದ, ಸದಾಚಾರದ ಈ ಜಗತ್ತಿನಿಂದಲೇ ಓಡಿಸಿದೆ’ ಎಂದು ಘೋಷಿಸಿದ್ದಾನೆ (ವೆಂಡಿಡ್ಯಾಡ್, ೧೦.೯/೧೯.೪೫). ಈ ಬಗೆಯ ಪಾರ್ಸಿ ಮತ್ತು ವೈದಿಕರ ದಾಯಾದಿ ಹಗೆತನ ನಂತರದ ವೈದಿಕರ ಪುರಾಣಗಳಲ್ಲೂ ಮುಂದುವರೆದು ಅಸುರರೆಂದರೆ ದುಷ್ಟರು, ಕ್ರೂರಿಗಳು ಎಂಬಂತೆ ನಿರಂತರವಾಗಿ ಚಿತ್ರಿಸಲ್ಪಟ್ಟಿತು. ಅಸುರರೆಂದರೆ ಖಂಡಿತ ದ್ರಾವಿಡರಲ್ಲ.
ಮಹಿಷಾಸುರನೆಂದರೆ ಕಕೇಷಿಯನ್ ಆರ್ಯರ ಮೂಲ ಪುರುಷರಲ್ಲಿ ಒಬ್ಬನಾದ, ನಿರ್ದಿಷ್ಟವಾಗಿ ಹೇಳುವುದಾದಲ್ಲಿ Slavic Old Wiseman (Al-Masoudi-Arabian Traveller) ಕಶ್ಯಪನ ಮರಿಮೊಮ್ಮಗನೂ ಹೌದು. ಹಾಗೆಯೇ ಬೃಹತ್ ನಂದಿಕೇಶ್ವರ ಹಾಗೂ ತಮಿಳಿನ ಅರುಣಾಚಲ ಪುರಾಣಗಳ ಪ್ರಕಾರ ಸ ್ವತಃ ಶಿವನೂ ಹೌದು. ಆದರೆ ಮಹಿಷಾಸುರ ಮರ್ದಿನಿ ಪುರಾಣ ಸೃಷ್ಟಿಯ ಉದ್ದೇಶ ಮೂಲದಲ್ಲಿ-ವರುಣ ಅರ್ಥಾತ್ ಅಹುರ್‌ಮಜ್ದಾನೇ ಮಹಿಷಾಸುರ! ಪರ್ಷಿಯನ್ ಮಜ್ದಾ ಎಂಬ ಪದ ಸಂಸ್ಕೃತದಲ್ಲಿ ಮಹಸ್ ಎಂದಾಗುತ್ತದೆ. ಮಹಸ್‌ಅಸುರನೇ ಮಹಿಷಾಸುರ. ಅವೆಸ್ತಾದ ಪ್ರಾಚೀನ ಪ್ರಯೋಗಗಳಲ್ಲಿ ಮಜಿ಼ಷ್ಟಾಹುರ ಎಂಬ ನಾಮಪದದ ಬಳಕೆ ವರುಣನಿಗಿದೆ. ಈ ಮಜಿ಼ಷ್ಟಾ ಅಹುರ (ಅಂದರೆ ಅಸುರ - ಪರ್ಷಿಯನ್ ಭಾಷೆಯ `ಹ’ ಕಾರ `ಜû’ ಕಾರಗಳು ಸಂಸ್ಕೃತದಲ್ಲಿ `ಸ’ ಕಾರಗಳಾಗುತ್ತವೆ.) ನನ್ನೇ ಸಂಸ್ಕೃತದಲ್ಲಿ ಮಹಿಷಾಸುರನೆಂದು ಕರೆಯಲಾಗುತ್ತದೆ. ಅನೇಕ ಇಂಡಾಲಜಿಸ್ಟರು ಮಹಿಷಾಸುರ ಹಾಗೂ ವೈದಿಕ ದುರ್ಗಿಯ ಯುದ್ಧವನ್ನು ಯಜ್ಞಾಚರಣೆಯ ದೇವಾರಾಧಕರಿಗೂ ಮತ್ತು ತಪೋ ಆಚಾರಣೆಯ ಮಜ್ದಾಸುರ ಆರಾಧಕರಿಗೂ ನಡುವೆ ಮುಂದುವರೆಯುತ್ತಲೇ ಬಂದ ದಾಯಾದಿ ಹಗೆತನವನ್ನಾಗಿಯೇ ಗುರುತಿಸಿದ್ದಾರೆ. ಮಹಿಷ ಪುರಾಣದಲ್ಲಿ ಮಹಿಷಾಸುರ ಇಂದ್ರಾದಿ ದೇವರುಗಳನ್ನು ಸ್ವರ್ಗದಿಂದ ಓಡಿಸುವುದು ಕೂಡ ಅಹುರ್‌ಮಜ್ದಾನ ಅನುಯಾಯಿ ರಾಜರು ಇಂದ್ರ-ದೇವರುಗಳನ್ನು ಆರ್ಯನ್ ವೆಜಾ಼ದಿಂದ ಓಡಿಸಿದ್ದರ ತದ್ವತ್ತು ನಿರೂಪಣೆಯಾಗಿದೆ. ವೈದಿಕ ಪುರಾಣಗಳಲ್ಲಿನ ಅಸುರರ ವಧೆಗಳೆಲ್ಲವೂ ಪ್ರತಿಮಾತ್ಮಕವಾಗಿ ಪಾರ್ಸಿಗಳ ಹಾಗೂ ಅವರ ಸರ್ವಶಕ್ತ ಅಹುರ್‌ಮಜ್ದಾನ ಚಾರಿತ್ರö್ಯಹನನದ ಕಥಾನಕಗಳೇ ಆಗಿವೆ. ಮಧ್ಯ ಏಷ್ಯಾದ ಮಸ್ಸಾಜಟಾದ (ಜಾಟ್ ಮೂಲದವರು) ರಾಣಿ ಟೊಮಿರಿಸ್ ಪರ್ಷಿಯಾದ ಸೈರಸ್ ರಾಜನನ್ನು ಕೊಂದದ್ದರಿಂದ ಆಕೆಯನ್ನು ಕೂಡ ಮಹಿಷಾಸುರ ಮರ್ದಿನಿ ಎಂದೇ ಶತಮಾನಗಳ ಕಾಲ ಕರೆಯಲಾಗುತ್ತಿತ್ತು. ಹಾಗೆಯೇ ಅಲೆಗ್ಸಾಂಡರ್ ಪರ್ಷಿಯನ್ ರಾಜ ಡೇರಿಯಸ್‌ನನ್ನ ಕೊಂದದ್ದರಿಂದ ಆತನನ್ನು ಮತ್ತು ಆತನೊಂದಿಗೆ ಸಮೀಕರಿಸಲ್ಪಟ್ಟಿದ್ದ ಸ್ಕಂದನನ್ನು ಮಹಿಷಾಸುರ ಮರ್ದನ ಎಂದೇ ಕರೆಯಲಾಗುತ್ತದೆ. ಅಂದರೆ, ಮೂಲದಲ್ಲಿ ಮಹಿಷಾಸುರನಾಗಿದ್ದ ಮಜ್ದಾಹುರನ ಧರ್ಮದ ಅನುಯಾಯಿ ರಾಜರು ಇವರಾದ್ದರಿಂದಲೇ ಇವರನ್ನು ಸಾಂಕೇತಿಕವಾಗಿ ಮಹಿಷಾಸುರರು ಎಂದು ಭಾವಿಸಲಾಗಿತ್ತೆಂಬುದಕ್ಕೆ ಈ ಪ್ರಸಂಗಗಳೇ ಸಾಕ್ಷಿ. ಮಹಿಷಾಸುರ ಮರ್ದಿನಿಯ ಪುರಾಣವು ಮೊದಲು ಹಬ್ಬಿದ್ದೇ ಪಾರ್ಸಿಗಳ ಇರಾನ್ ಮತ್ತು ಅಫ್ಘಾನಿಸ್ತಾನಗಳಲ್ಲೇ.
ಅತ್ಯಂತ ಪ್ರಾಚೀನವಾದ ಮಹಿಷಾಸುರ ಮರ್ದಿನಿಯ ಪ್ರತಿಮೆಗಳು ಉತ್ತರ ಇರಾನಿನ ಡೇಲಾಮನ್‌ನಲ್ಲೂ ಇನ್ನಿತರೆಡೆಗಳಲ್ಲೂ ಸಿಕ್ಕಿವೆ. ಝೊರಾಷ್ಟಿçಯನ್ ಧರ್ಮವು ನೆಲೆಸಿದ್ದ ಹಾಗೂ ಪ್ರಬಲವಾಗಿದ್ದೆಡೆಯಲ್ಲೇ ಈ ಪುರಾಣವನ್ನು ಮೊದಲು ಹಬ್ಬಿಸಲಾಯಿತೆಂಬುದೇ ವೈದಿಕರ ಮಜ್ದಾಹುರನ ಬಗೆಗಿನ ಹಗೆತನ, ದಾಯಾದಿ ಮತ್ಸರಕ್ಕೆ ಸಾಕ್ಷಿ. ವಿಚಿತ್ರವೇನೆಂದರೆ ಮಹಿಷಾಸುರ ಒಬ್ಬ ದ್ರಾವಿಡ, ಬೌದ್ಧ ಭಿಕ್ಕು ಅಂತ ನಂಬಿರುವವರು ಒಂದು ಕಡೆಯಿದ್ದರೆ, ಮತ್ತೊಂದು ಕಡೆ ಈ ಪಾರ್ಸಿ-ವೈದಿಕರ ದೇವಅಸುರದ ಸಮರವು ತೇರಾವಾದದ ಸಾಹಿತ್ಯದಲ್ಲೂ ನುಸುಳಿದೆ! ಅಲ್ಲೂ ಬೌದ್ಧರ ಅಸುರ ವಿರೋಧಿ ಧೋರಣೆಯೇ ಮುಂದುವರೆದಿದೆ. ತಾತ್ವಿಕವಾಗಿ ಬೌದ್ಧ ಧರ್ಮ ಮಹಿಷಾಸುರ ವಿರೋಧವನ್ನು ಒಳಗೊಂಡಿದ್ದರು ನಾವು ಮಹಿಷನೇ ಬೌದ್ಧ ಎಂದು ನಂಬುವುದು ವಿರೋಧಾಭಾಸವಲ್ಲವೇ? ಇಲ್ಲಿ ಮಹಿಷ ಮತ್ತು ದುರ್ಗಿಯರ ನಡುವೆ ಯಾರು ಒಳಿತಿನ ಪರ ಅಥವ ಯಾರು ಕೆಡುಕಿನವರು ಎಂಬುದು ಎರಡನೆಯ ಪ್ರಶ್ನೆ. ಆದರೆ ಮಹಿಷನ ಪರವಹಿಸುವುದು ಅಂದರೆ, ಖಂಡಿತವಾಗಿಯೂ ಅದು ಆರ್ಯ-ಪಾರ್ಸಿಗಳ ಸರ್ವಶಕ್ತನಾದ ಅಹುರ್‌ಮಜ್ದಾನ ಪರವಾಗಿಯೂ, ಝೊರಾಷ್ಟಿçಯನ್ ಧರ್ಮದ ಪರವಾಗಿಯೂ ನಿಲ್ಲುವುದೆಂದೇ ಅರ್ಥ. ಇದು ನಿಸ್ಸಂದಿಗ್ಧವಾದ ಮಾತು.
