ತಮ್ಮ ಸಿದ್ದಾಂತವೊಂದನ್ನು ಬಲಪಡಿಸಲು, ವಿರೋಧಿ ಸಿದ್ದಾಂತದವರ ಎದುರು ನಿಲ್ಲಲು ಇತಿಹಾಸವನ್ನೇ ತಿರುಚುವ ಸಾಹಸಕ್ಕೆ ಕೈ ಹಾಕಿರುವ ಈ ಜನರಿಗೆ ಬೇಕಾಗಿರುವುದಾದರು ಏನು ???
ಮಹಿಷ - ಕನ್ನಡದ ‘ಕೋಣ’ ಎಂಬ ಪದಕ್ಕೆ ಸಂಸ್ಕೃತದಲ್ಲಿರುವ ಪದ. ಒಳಾರ್ಥದಲ್ಲಿ ಮ - ಈಶ, ಮಹಾರಾಜ ಎಂದು ಅರ್ಥೈಸುವ ಪದ. ಇದಕ್ಕೆ ಪುಷ್ಟಿ ಕೊಡುವಂತೆ ಸಿಂಧೂ ಅವಶೇಷಗಳಲ್ಲಿ ಸಿಕ್ಕ ಪಶುಪತಿ ಮುದ್ರೆಯು ಮಹಿಷನೆಂಬ ಮಹಾರಾಜಪಟ್ಟದ ಬಗ್ಗೆ ಸುಳಿವು ಕೊಡುವಂತಿದೆ.
ಎಮ್ಮೆ ಕೋಣಗಳೆಂದರೆ ಪ್ರಾಚೀನ ಭಾರತಕ್ಕೆ, ಅದರಲ್ಲೂ ಡೆಖ್ಖನ್ ಭಾರತಕ್ಕೆ ಈ ನೆಲಮೂಲದ ರಾಸು ವರ್ಗ. ಈಗಲೂ ಇದೇ ಎಮ್ಮೆ ಮೂಲದಿಂದಲೇ ಭಾರತದ ಹಾಲು ಉತ್ಪಾದನೆ ಹೆಚ್ಚಿರುವುದೆಂಬ ಸತ್ಯ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತದ ಒಟ್ಟು ಹಾಲು ಉತ್ಪಾದನೆಯಲ್ಲಿ ಎಮ್ಮೆಯಿಂದ ಆಗುಗ ಉತ್ಪಾದನೆಯು ಶೇ. ೫೫ ರಷ್ಟು!
ಈ ರಾಸು ವರ್ಗಗಳಿಂದಲೇ ಇಲ್ಲಿನ ಜನವರ್ಗ ರಾಜಮನೆತನಗಳು ಹಸನಾಗಿದ್ದವು. ನರ್ಮದೇ ತೀರದಲ್ಲಿತ್ತು ಎನ್ನಲಾಗುವ ಪೌರಾಣಿಕ ಸಾಮ್ರಾಜ್ಯ ಮಾಹಿಷ್ಮತಿಯು ಸಹ ಕೋ(ಣ)ಆಧಾರಿತ ಸಾಮ್ರಾಜ್ಯವೆ. ಕೋಣ ಗಣದವರಿಂದ ಆಳಲ್ಪಟ್ಟ ಕೊಂಕಣ ಪ್ರದೇಶದ ಇತಿಹಾಸವು ಸಹ ಇದೇ ಕೋ(ಣ)ಕುಲದೊಂದಿಗೆ ಬೆಸೆದುಕೊಂಡಿದೆ. ಈಗಲೂ ಸಹ ಕರಾವಳಿಗೆ ನೇಟಿವ್ ಆಗಿ ಇರುವ ಏಕೈಕ ರಾಸು ವರ್ಗ ಎಂದರೆ ಅದು ಎಮ್ಮೆ/ಕೋಣಗಳೆ. ಇದರಿಂದಲೇ ಅಲ್ಲಿ ಕಂಬಳ ಹೆಸರುವಾಸಿಯಾಗಿರಬಹುದೇನೊ ?
ಕಾವೇರಿ ಕೊಳ್ಳವನ್ನಷ್ಟೂ ಆಳಿದ ಕೊಂಗ ಸಹಿತ ಗಂಗರ ಮೂಲವು ಸಹ ಕೋ(ಣ) ಸಂತತಿಯೊಂದಿಗೆ ತಳುಹಾಕಿಕೊಂಡಿದೆ. ಗಂಗರ ಮೊದಲ ಅರಸ ಕೊಂಗುಣಿ, ಗಂಗರ ಪಟ್ಟದ ಹೆಸರು ಕೊಂಗುಣಿಪಟ್ಟ. ಉತ್ತರದವರ ಸಂಪರ್ಕದೊಂದಿಗೆ, ತಲಕಾಡಿನ ಕೊಣ್ಗರು, ತಮ್ಮ ಹೆಸರನ್ನು ಗಣ್ಗರು ಎಂದು ರೂಪಾಂತರಿಸಿಕೊಂಡಿರುವ ಸಾಧ್ಯತೆ ಹೆಚ್ಚು. ಆದರೆ ದಕ್ಷಿಣದಲ್ಲಿದ್ದ ಕೊಣ್ಗರು ಅನ್ಯದೇಶಿಯರ ಪ್ರಭಾವಕ್ಕೆ ಒಳಗಾಗದೆ ಕೊಣ್ಗರಾಗಿಯೇ ಉಳಿದಿರಬಹುದು.
ವೀರಗಲ್ಲುಗಳ ಪೈಕಿ ಅತಿ ಹೆಚ್ಚಿನವು ತುರುಗೋಳ ಕಾಳಗದವು. ಎಂದರೆ, ಕೋ(ಣ) ಸಂಪತ್ತನ್ನು ಕೊಳ್ಳೆ ಹೊಡೆಯಲು ಬಂದ ಬೆರೆ ರಾಜ್ಯದ ಸೈನಿಕರನ್ನು ಬಗ್ಗು ಬಡೆದು, ಸಂಪತ್ತನ್ನು ಉಳಿಸಿ ರಣರಂಗದಲ್ಲಿ ಪ್ರಾಣತ್ಯಾಗಗೈದ ವೀರರ ನೆನಪಿನಲ್ಲಿ ತಲೆ ಎತ್ತಿದ ತುರುಗೋಳ ಕಾಳಗದ ವೀರಗಲ್ಲುಗಳ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಅದರಲ್ಲಿನ ಕೆತ್ತನೆಗಳು ಹಲವೆಡೆ ಎಮ್ಮೆ ಕೋಣಗಳ ಹೋಲಿಕೆಯನ್ನು ಹೋಲುತ್ತವೆ. ದನ ಹೋರಿಗಳ ಹೋಲಿಕೆ ಇರುವವು ತೀರಾ ಕಡಿಮೆ.
ಎಮ್ಮೆ ಕೋಣಗಳು ನೆಲೆಲಶುಪಾಲನೆಯ ಕವಲಿನವರಾದ ಆದಿದ್ರಾವಿಡ ಆದಿಕರ್ನಾಟಕ ಜನಸಮುದಾಯದೊಂದಿಗೆ ಬೆಸೆದುಕೊಂಡಿರುವ ರಾಸು ವರ್ಗ.
ಅಲೆಮಾರಿ ಪಶುಪಾಲಕರಾಗಿದ್ದ ಗೌಡ ದ್ರಾವಿಡರೊಂದಿಗೆ, ಅಲೆಮಾರಿತನಕ್ಕೆ ಒಗ್ಗಿದ್ದ ಕುರಿ ಹಾಗು ದನಗಳು ಬೆಸೆದುಕೊಂಡಿದ್ದರೆ, ನೆಲೆಲಶುಪಾಲನೆಗೆ ಒಗ್ಗಿದ್ದ ಎಮ್ಮೆ ಹಾಗು ಆಡುಗಳು ಆದಿದ್ರಾವಿಡ ಆದಿಕರ್ನಾಟಕ ಜನಸಮುದಾಯಗಳೊಡನೆ ಬೆಸೆದುಕೊಂಡಿದ್ದವು. ಮೊದಮೊದಲು ಬೇಸಾಯದಲ್ಲಿ ಕೋಣಗಳಾಗಲಿ, ಎತ್ತುಗಳಾಗಲಿ ಬಳಕೆಯಾಗುತ್ತಿರಲಿಲ್ಲ. ಕಾಡು ಬೇಸಾಯಕ್ಕಾಗಲಿ, ಗದ್ದೆ ಬೇಸಾಯಕ್ಕಾಗಲಿ, ಮನುಷ್ಯರೆ ನೊಗ ಹೊತ್ತು ಹೆಂಟೆ ಹೊಡೆದು ಕುಂಟೆ ಕಟ್ಟುವ ಸಾಹಸಗಳು ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ಕೋಣಗಳನ್ನು ಪಳಗಿಸಿ, ಅವುಗಳ ಮೂಲಕವು ಉಳಿಮೆಗೆ ಬಳಸಲಾರಂಭವಾಯಿತು. ಈಗಲೂ ಸಹ ಕರಾವಳಿ ಪ್ರದೇಶಗಳಲ್ಲಿ, ಹಳೆ ಮೈಸೂರು ಭಾಗದ ಕೆಲ ಬೇಸಾಯಗಾರರು ಸಹ ಕೋಣಗಳನ್ನೆ ಉಳುಮೆಗೆ ಬಳಸುವುದು ರೂಢಿ. ಹಲವು ಕಡೆ ಇದರ ಸ್ಥಾನವನ್ನು ಎತ್ತುಗಳು ಆವರಿಸಿಕೊಂಡಿವೆ. ಡೆಖ್ಖನ್ ಭಾರತಕ್ಕೆ ದನಗಳನ್ನು ತಂದದ್ದು ಸಹ ಹೊಲಯ ಮಾದಿಗರೆ. ಸಾಗಾಣಿಕೆಗೆಂದು ಕ್ರಿ.ಪೂ ಸುಮಾರು ೭೦೦-೮೦೦ರಲ್ಲಿಯೆ ನೈಋತ್ಯ ಭಾಗದಿಂದ, ಸಣ್ಣ ತಳಿಯ ಹಸುಗಳನ್ನು ತಂದಿದ್ದು, ಅದನ್ನು ತಮ್ಮ ಕುಲದ ಹೆಸರಿನೊಂದಿಗೆ ತಳಕುಹಾಕಲಾಗಿದೆ. ಹಳ್ಳಿರ್ ತಳಿಯ ಹಸುವೇ ಇಂದು ಹಳ್ಳಿಕಾರ್ ಎಂದು ಹೆಸರುವಾಸಿಯಾಗಿದ್ದು, ಡೆಖ್ಖನ್ ಭಾರತ ಹಲವು ಸ್ಥಳೀಯ ಹಸುಗಳ ಮೂಲ ಇದಾಗಿದೆ.
ಹರ್ಮನ್ ಮೊಗ್ಲಿಂಗ್, ಬಿ ಲುಯಿಸ್ ರೈಸ್, ಎಡ್ಗರ್ ಥರ್ಸ್ಟನ್, ಮುಂತಾದ ಪ್ರಮುಖ ಆಂಗ್ಲೋ ಇಂಡಿಯನ್ ಇತಿಹಾಸಕಾರರು, ದೇವದತ್ತ ಪಟ್ನಾಯಕ್, ಎಸ್ ಎಸ್ ಹಿರೇಮಠರಂತಹ, ಈಗಿನ ಸಂಶೋಧನಾಕಾರರು, ಮಲಬಾರ್ ಪ್ರಾಂತ್ಯದ ಒಂದು ತಮಿಳು ಜಾನಪದ ಹಾಡನ್ನು ಉಲ್ಲೇಖಿಸಿ, ಆರಂಬ (ಬೇಸಾಯ) ಎಂಬುದು ಹೊಲಯ ಸ್ತ್ರೀಯರ ಅನ್ವೇಷಣೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಕಥೆಯ ಮುಂದುವರಿದ ಭಾಗದಲ್ಲಿ ಗಿಣಿಯೊಂದು ಬತ್ತದ ತೆನೆಯನ್ನು ತಂದು ಹೊಲತಿಯ ಕೈಗೆ ಕೊಡಲು, ಅದನ್ನು ಬಿತ್ತಿ, ನಾಗರೀಕತೆಗೆ, ಜಗತ್ತಿಗೆ ಬೇಸಾಯವನ್ನು ಪರಿಚಯಿಸಿಕೊಟ್ಟವಳು ಹೊಲಯ ಸ್ತ್ರೀ ಎಂಬುದನ್ನು ಇವರುಗಳು ಉಲ್ಲೇಖಿಸುತ್ತಾರೆ. ಇದಕ್ಕೆ ಪುಷ್ಟಿ ಕೊಡುವಂತೆ, ಹೊಲಯರೇ ಆದಿ ಬೇಸಾಯಗಾರರು, ಜಗತ್ತಿಗೆ ಬೇಸಾಯ ಪರಿಚಯಿಸಿಕೊಟ್ಟವರು ಎಂಬುದನ್ನು ಹಲವು ಅಂಶಗಳನ್ನು ಮಂಡಿಸಿ ನಿರೂಪಿಸಿದ್ದಾರೆ. ಇಲ್ಲಿ, ತಂತ್ರ, ದ್ರಾವಿಡ ಜಾನಪದಗಳು, ಬೇಸಾಯದಲ್ಲಿ ಹೊಲಯರಿಗಿದ್ದ ನುರಿತ ಜ್ಞಾನ, ಕೃಷಿ ಪ್ರದಾನ ಸಂಸ್ಕೃತಿಯಲ್ಲಿನ ಹೊಲಯ ಮಾದಿಗ ಸಮುದಾಯಗಳ ಒಳಗೊಳ್ಳುವಿಕೆ ಹಾಗು ಅಧಿಕಾರ ಪರಂಪರೆಗಳನ್ನು ಉದಾಹರಿಸಿ ನಿರೂಪಿಸಿದ್ದಾರೆ.
ಇಷ್ಟೆಲ್ಲಾ ಪೀಠಿಕೆ ಕೊಡುವುದಕ್ಕೆ ಒಂದು ಕಾರಣವಿದೆ. ಮಹಿಷನ ವಿಷಯ ಇದೀಗ ಇಲ್ಲಿ ಬರುವುದು.
ಬೇಸಾಯವೇನು ನಾಗರಿಕತೆಯಲ್ಲಿ ಸುಲಭವಾಗಿ ಬೆಳೆದುಬಂದಿಲ್ಲ. ಅದಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಅತಿವೃಷ್ಟಿ, ಅನಾವೃಷ್ಟಿ, ಪ್ರಯೋಗ, ರೋಗರುಜಿನೆ, ಕಾಡುಪ್ರಾಣಿಗಳ ಕಾಟ, ಪರಕೀಯ ದಾಳಿ, ಇತ್ಯಾದಿ ಅಡೆತಡೆಗಳನ್ನು ದಾಟಿ ಒಂದು ಸಾಂಪ್ರದಾಯಿಕ ಕೃಷಿ ಪದ್ದತಿಯ ಹುಟ್ಟಿಗೆ ನಾಂದಿ ಹಾಡಿದವರು ಹೊಲಯ ಮಾದಿಗರು.
ಈ ಸಂದರ್ಭದಲ್ಲಿ ಪ್ರಮುಖ ಬೇಸಾಯಕ್ಕೆ ಅಡೆತಡೆಯಾದುದು ಕಾಡುಹಂದಿಗಳು ಹಾಗು ಕೋಣಗಳು. ಇದು ಕೋಣಗಳನ್ನು ಪಶುಪಾಲನೆಗೆ ಒಗ್ಗಿಸುವುದಕ್ಕು ಹಿಂದಿನ ಹಂತ. ಇದೇ ಹಂತದಲ್ಲಿ ಕೃಷಿಗೆ ಅಧಿದೇವತೆಯಾಗಿ ವರಾಹಿ ದೇವಿಯ ಸೃಷ್ಟಿಯಾಗುತ್ತದೆ. ವರಾಹಿಯು ಕೆಲವೊಮ್ಮೆ ಮಾನವ ಮುಖದಲ್ಲಿಯು, ಕೆಲವೊಮ್ಮೆ ಕಾಡುಹಂದಿ ಮುಖದಲ್ಲಿಯು, ಕೋಣದ ಮೇಲೆ ಸವಾರಿ ಮಾಡುವಂತೆ ಚಿತ್ರಿಸಲ್ಟಪ್ಪ ಬೇಸಾಯದ ಅಧಿದೇವತೆ. ಹೊಲಯರ ಮಾತೃಪ್ರಧಾನ ಧರ್ಮದಂತೆ, ಆ ದೈವದ ಚಿತ್ರಣ ಸ್ತ್ರೀ ರೂಪಿಯೆ ಆಗಿದೆ.
ಭಿನ್ನ ಪ್ರದೇಶಗಳಲ್ಲಿ ಕಾಡುಹಂದಿಯೊ, ಅಥವ ಕಾಡುಕೋಣವೋ, ಒಂದಿಲ್ಲೊಂದರ ಕಾಟ ಬೇಸಾಯಕ್ಕೆ ಇದ್ದೇ ಇತ್ತು. ಹೆಂಗಸರು ಬೇಸಾಯದಲ್ಲಿ, ಗಂಡಸರು ಬೇಟೆಯಲ್ಲಿ ತೊಡಗಿದ್ದ ಆ ನಾಗರಿಕತೆಯ ಆದಿ ಕಾಲದಲ್ಲಿ, ಕಾಡು ಕೋಣ/ ಕಾಡು ಹಂದಿಗಳ ಉಪಟಳವನ್ನು ತಡೆಯುವ ಸಲುವಾಗಿ, ಅವನ್ನು ಬೇಟೆಯಾಡಿ ಹಿಡಿದು ತಂದು, ಅದರಿಂದ ನಷ್ಟ ನೋವು ಅನುಭವಿಸಿದ್ದ ಹೆಂಗಸಿನ (ಸತ್ತವರ ಸಮಾಧಿ/ಗದ್ದುಗೆ) ಎದುರು ಬಲಿ ಹಾಕುವ ಪದ್ದತಿ ರೂಢಿಯಾಗಿರುವಂತೆಯೆ ಕೋಣ ಬಲಿ ಆಚರಣೆ ಆರಂಬವಾದಂತಿದೆ. ತಂತ್ರ ಪಂಥದಲ್ಲಿ ಇದೊಂದು ಸಾಧನೆಯ ಹಾದಿಯೂ ಹೌದು.
ಮಾರ್ಲಮಿ ಎಂಬುದಕ್ಕೆ ಮಾರರ ಅಮ್ಮ (ಹೊಲಯ ಮಾದಿಗರ ಅಮ್ಮ) ಎಂಬ ಅರ್ಥವಿದೆ. ಮಾತೃಪ್ರಧಾನ ಸಂಸ್ಕೃತಿಯು ಹೊಲಯ ಮಾದಿಗರ ಮೂಲದ್ದಾಗಿದ್ದು, ಇಲ್ಲಿ ತಾಯಿಯೇ ಕುಟುಂಬದ ಹಿರಿಯ ಸ್ಥಾನದಲ್ಲಿರುತ್ತಿದ್ದಳು. ಅಜೀವಿಕ ಸಂಸ್ಕೃತಿಯಂತೆ ತಾಯಿ, ನೆಲ, ನೀರು, ನೇಸರ, ಚಂದಿರ, ಅರಸ ಹಾಗು ಅರಸಿಯರು ಪ್ರತ್ಯಕ್ಷ ದೈವಗಳು ಹಾಗು, ಗತಿಸಿದ ಇವರುಗಳು ದೇವರುಗಳು. ಇವರು ಗತಿಸಿ ಸೇರಿದ ಗದ್ದುಗೆಗಳೇ ದೇವಾಲಯ ಸಂಸ್ಕೃತಿಗೆ ಬುನಾದಿಯಾಯಿತು.
ಕೋಣ ಬಲಿಯ ಸಂಪ್ರದಾಯ ಹೀಗೆ ಆರಂಭವಾಗಿ, ಭಿನ್ನವಾಗಿ ರೂಪಾಂತರಗೊಂಡದು ಮಾತ್ರ ಸೋಜಿಗದ ಸಂಗತಿ. ಈ ಹಂತದ ನಂತರ, ಆರಂಬಗಾರರು ಕೋಣಗಳನ್ನು ಪಳಗಿಸಿ, ನೆಲೆಲಶುಪಾಲನೆಗೆ ಒಗ್ಗಿಸಿಕೊಂಡರು. ಎಮ್ಮೆಗಳು ಹಾಲು ಕರೆಯಲು ಆರಂಭಿಸಿದವು. ನಾಗರಿಕತೆ ವಿಫುಲವಾಗಿ ಬೆಳೆಯತೊಡಗಿತು. ತಂತ್ರ ಸಾಧನೆಯಲ್ಲಿ ಸ್ಥಾನ ಪಡೆದಿದ್ದ ಕೋಣ ಬಲಿಯ ಸಂಪ್ರದಾಯವನ್ನು ನಿಲ್ಲಿಸಿಯೇ ಬಿಡುವುದು ಸುಲಭದ ಮಾತಾಗಿರಲಿಲ್ಲ. ಈ ಹಂತದಲ್ಲಿ, ಉಪಟಳವಾಗಿದ್ದ ಕೋಣ, ಆರಂಬಗಾರರ ಮನೆಯ ಸಿರಿಯಾಗಿ ಮಾರ್ಪಾಡಾಗಿತ್ತು. ಸಾಂಪ್ರದಾಯಿಕವಾಗಿ ಕೋಣ ಬಲಿ ಮುಂದುವರೆದರೂ ಸಹ, ಅದರ ಹಿಂದಿದ್ದ ಭಾವ ಬದಲಾಗಿತ್ತು.
ಹಿಂದೆ, ಉಪಟಳವಾಗಿತ್ತು ಎಂಬ ಕಾರಣಕ್ಕೆ ಬೇಟೆಯಾಡಿ ರೋಷದಿಂದ ಬಲಿ ಹಾಕುತ್ತಿದ್ದ ಅಭ್ಯಾಸ, ಈಗ ಸಂಪ್ರದಾಯವನ್ನು ಪಾಲಿಸಬೇಕು, ತಂತ್ರ ಸಾಧನೆಗೆ ಇದರ ಅವಶ್ಯಕತೆ ಇದೆ ಎಂದು, ತಾವೇ ಸಾಕಿದ, ತಮ್ಮ ಜೊತೆಗೆ ಬೆಳೆದ ಕೋಣವೊಂದನ್ನು ದುಃಖಭಾವದಿಂದಲೇ ಬಲಿ ಕೊಡಲು ಮುಂದುವರೆಸಿಕೊಂಡು ಹೋಗುವಂತಾದರು.
ಮತ್ತೊಂದು ಆಯಾಮದಲ್ಲಿ ನೆಲಮೂಲದ ರಾಸುವರ್ಗವಾಗಿದ್ದರ ಕಾರಣ, ಅವುಗಳ ಸಂತತಿ ಹೆಚ್ಚೆಚ್ಚು ವೃದ್ಧಿಯಾಗುತಿತ್ತು, ಹಾಗು ಇವುಗಳ ಸಂಖ್ಯೆಯನ್ನು ಅಂಕೆಯಲ್ಲಿಡುವ ಕಾರಣಕ್ಕು ಇವುಗಳ ಬಲಿ ನಡೆಯುತ್ತಿತ್ತು ಎನ್ನಬಹುದು. ಸದ್ಯಕ್ಕೆ ಭಾರತದಲ್ಲಿ ಈ ಸ್ಥಿತಿ ಕಾಣದು, ಆದರೆ ನೇಪಾಳದಲ್ಲಿ ಈ ಸ್ಥಿತಿ ಇದೆ.
ಈ ಆರಂಭಿಕ ಹಂತಗಳಲ್ಲಿಯೇ ಕೃಷಿ ದೇವರಾಗಿ ವರಾಹಿ ದೇವರ ಸೃಷ್ಟಿಯಾಯಿತೆಂದರೆ ತಪ್ಪಾಗಲಾರದು. ಹೊಲಯ ಮಾದಿಗರ ಮೂಲದ ಮಾತೃಪ್ರಧಾನ ಸಂಸ್ಕೃತಿಯಂತೆ, ಈ ಕೃಷಿದೇವರು ಎನಿಸಿಕೊಳ್ಳು ವರಾಹಿ ದೇವರು ಸಹ ಸ್ತ್ರೀ ಸ್ವರೂಪಿಯೆ. ಒಮ್ಮೆ ಮಾನವ ಮುಖದಲ್ಲಿಯು, ಇಲ್ಲವೆ ಕಾಡು ಹಂದಿಯ ಮುಖದಲ್ಲಿಯು, ಕೋಣಸವಾರಿ ಮಾಡುತ್ತಿರುವಂತೆ ಚಿತ್ರಣಗೊಂಡಿರುವ ಈ ದೈವವು, ಕಾಡು ಹಂದಿ ಹಾಗು ಕೋಣ ಎರಡನ್ನೂ ತೋರಿರುವುದು ಬೇಸಾಯದ ಆರಂಭಿಕ ಹಂತವನ್ನು ಸೂಚಿಸುವಂತಿದೆ.
ದ್ರಾವಿಡ ಪರಂಪರೆಯಲ್ಲಿ ಒಂದು ಹೊಸ ಊರು/ಹಳ್ಳಿ/ನಗರ/ಕೋಟೆ/ ಸ್ಥಾಪಿಸುವ ಸಾಂಪ್ರದಾಯಿಕ ಹಕ್ಕು ಅಧಿಕಾರ ಇದ್ದುದು ಹೊಲಯ ಮಾದಿಗರಿಗೆ ಮಾತ್ರ. ಇದಕ್ಕಾಗಿ ನೊಗಕ್ಕೆ ಕೋಣ ಇಲ್ಲವೆ ಎತ್ತುಗಳ ಕಟ್ಟಿ ತೆಂಕುದಿಕ್ಕಿನಿಂದ ಬಲಬದಗಿಗೆ ನಡೆಯಲು ಬಿಟ್ಟು, ಬಲಬದಿಗೆ ಒಂದು ಸುತ್ತು ಹಾಕಿಸಿ, ಊರ ಗಡಿ ಹಾಕಿಸಿ, ವಸತಿಗೆ, ಆರಂಬಕ್ಕೆ (ಬೇಸಾಯಕ್ಕೆ), ಎಂದು ಭಾಗಿಸಿ, ನಂತರ, ಈಗಾಗಲೇ ಇದ್ದ ಊರಿನಿಂದ ಕರಿಕಲ್ಲನ್ನು ತಂದು ಹೊಸ ಊರಿನ ತೆಂಕುದಿಕ್ಕಿನಲ್ಲಿ ನೆಟ್ಟು, ಊರಿನ ತಗ್ಗಿಗೆ ಒಂದು ಹಾದಿಯನ್ನು ಬಲಿ ಹಾಕಿ ಊಳಿ, ಗೋರೆಗೆ ಕೋಣವನ್ನು ಬಲಿ ಹಾಕಿ ಪೇರಿ ಹಾಕಿ, ಅಚ್ಚುಕಟ್ಟಾದ ಒಂದು ಊರನ್ನು ಸ್ಥಾಪಿಸುತ್ತಿದ್ದರು. ಇದರ ಹಿಂದಿನ ತಂತ್ರ-ಜ್ಞಾನ ಸಾಮಾನ್ಯರಿಗೆ ನಿಲುಕದ್ದು. ಹೀಗೆ ಬಲಿ ಸಂಪ್ರದಾಯ ನಡೆದುಕೊಂಡು ಬಂದಂತಿದೆ.
ಈ ಕೋಣಬಲಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಜನಸಮುದಾಯಗಳೆಲ್ಲವು ಬ್ರಾಹ್ಮಣರಲ್ಲದವು. ಮಾದಿಗರು ಇಲ್ಲವೆ ಆದಿ ಜಾಂಬವರು ಆಚರಣೆಯ ವಾರಸುದಾರರು. ಕೆಲವು ಕಡೆ ಹೊಲಯರು. ಕೋಣವನ್ನು ಬಲಿ ಹಾಕುವ ತೊಗಟವೀರ, ಬೇಡ ನಾಯಕರವನು. ಬಲಿ ಪಡೆದುಕೊಳ್ಳುವ ಸ್ಥಾನದಲ್ಲಿ ಇರುವ ದೈವವು ಶಕ್ತಿಸ್ವರೂಪಿಣಿ. ಈಕೆ ಹೊಲಯ ಮಾದಿಗರ ಪೂರ್ವಜೆಯು ಹೌದು. ವೈದಿಕ ಪರಿಭಾಷೆಯಲ್ಲಿ ಹೇಳುವುದಾದರೆ ಈಕೆ ಜಗತ್ಜನನಿ, ಗಾಯತ್ರಿ, ಜಗದಂಬೆ.
ಕೋಣಬಲಿ ಮುದ್ರೆ (ಸಿಂಧೂ ನಾಗರಿಕತೆಯ ಮುದ್ರೆ)
ಈ ಕೋಣಬಲಿಯ ಸಂಪ್ರದಾಯದ ಇತಿಹಾಸದ ಬಗ್ಗೆ ಹೇಳುವುದಾದರೆ, ಈ ಆವರಣೆಗೆ ಹೋಲುವ ಮುದ್ರೆಯು ಸಿಂಧೂ ಅವಶೇಷಗಳಲ್ಲಿ ದೊರೆತಿದೆ.
ಮಹಿಷ ಎಂದರೆ ಕೋಣವಷ್ಟೇ
ಮಹಿಷಾಸುರ ಎಂಬ ಪಾತ್ರ ಬಹುಶಃ ಕೋಣವನ್ನು ಕಡಿಯುವವನದಾಗಿರಬಹುದು.
ಈಗಲೂ ಸಹ ಕರ್ನಾಟಕದ ಕೆಲ ಭಾಗಗಳಲ್ಲಿ ಕೋಣ ಬಲಿಗಳಯ ನಡೆಯುತ್ತವೆ. ತಲೆ ಕಡಿದ ಮೇಲೆ, ಆ ತಲೆಯನ್ನು ಪೂಜಾರಿಯು ತನ್ನ ತಲೆ ಮೇಲೆ ಹೊರುತ್ತಾನೆ! ಆಗ ಅವನ ಚಿತ್ರಣ ಥೇಟ್ ಸಿಂಧೂ ಅವಶೇಷಗಳಲ್ಲಿದ್ದ ಪಶುಪತಿ ಮುದ್ರೆಯಂತೆಯೇ ಇರುತ್ತದೆ.
ಇದರ ಅರ್ಥ ಸ್ಪಷ್ಟ. ಮಹಿಷ ಎಂದರೆ ಎಮ್ಮೆಯಷ್ಟೆ. ಮಹಿಷಾಸುರ ಎಂಬ ಪಾತ್ರವು ನಿಸ್ಸಂಶಯವಾಗಿ ಕೋಣ ಕಡಿಯುವವನ, ಇಲ್ಲವೆ ಕಡಿದ ಕೋಣದ ತಲೆಯನ್ನು ತನ್ನ ತಲೆಯ ಮೇಲೆ ಹೊತ್ತು, ತನಗೇ ಕೋಣದ ಕೊಂಬು ಬಂದಂತೆ ಕಾಣಿಸಿಕೊಳ್ಳುವವನ ಕುರಿತಾದುದು ಎಂದು.
ಇದಕ್ಕೊಂದಿಷ್ಟು ಸಾಕ್ಷ್ಯಚಿತ್ರ ಪುರಾವೆಗಳು ಕೆಳಗಿನಂತಿವೆ. ೫ನೇ ಶತಮಾನದ ಎಲ್ಲೋರ ಗುಹೆಯಲ್ಲಿನ ಮಹಿಷಮರ್ಧಿನಿಯ ಮೂರ್ತಿಯ ಕೆತ್ತನೆಯಲ್ಲಿ, ಮಾತೃದೇವತೆಯು ಬರಿ ಕೋಣವನ್ನಷ್ಟೇ ಕೊಲ್ಲುವ ಚಿತ್ರಣವಿದೆ.
೫ನೆ ಶತಮಾನದ ಮಹಿಷಮರ್ಧಿನಿ
(ಎಲ್ಲೋರ ಗುಹೆ)
೭ನೆ ಶತಮಾನದ ಐಹೊಳೆಯ ಮಹಿಷಮರ್ಧಿನಿಯ ಕೆತ್ತನೆಯಲ್ಲಿಯು ಸಹ ಇರುವುದು ಕೇವಲ ಕೋಣದ ಚಿತ್ರಣವೆ.
೭ನೆ ಶತಮಾನದ ಮಹಿಷಮರ್ಧಿನಿ
(ಐಹೊಳೆ)
ತಂಜಾವೂರಿನ ಬೃಹದೀಶ್ವರ ದೇವಾಲಯದ ೯ನೆ ಶತಮಾನದ ಮಹಿಷಮರ್ಧಿನಿಯ ಮೂರ್ತಿಯ ಕೆತ್ತನೆಯಲ್ಲಿಯು ಸಹ ಕೋಣದ ತಲೆ ಇದೆ.
೯ನೆ ಶತಮಾನದ ಮಹಿಷಮರ್ಧಿನಿ
(ತಂಜಾವೂರು)
೧೨-೧೩ನೆ ಶತಮಾನದ ಮಹಿಷಮರ್ಧಿನಿ
(ಹಳೆಬೀಡು)
ಆದರೆ ೧೪-೧೩ನೆ ಶತಮಾನದ ಹೊತ್ತಗೆ ಮಹಿಷಮರ್ಧಿನಿಯ ಮೂರ್ತಿಯ ಕೆತ್ತನೆಯಲ್ಲಿ ಮಹಿಷಾಸುರ ಎಂಬ ವ್ಯಕ್ತಿಯ ಕೆತ್ತನೆ ಪ್ರತ್ಯಕ್ಷಗೊಂಡದ್ದು ಆ ಕಾಲದಲ್ಲಾಗಿರಬಹುದಾದ ಘಟಬೆಗಳ ಬಗ್ಗೆ ಒಂದಷ್ಟು ಜಿಜ್ಞಾಸೆ ಮೂಡಿಸುತ್ತದೆ.
೧೩ನೆ ಶತಮಾನದ ಮಹಿಷಮರ್ಧಿನಿ
(ರಾಣಿ ಬಾವಿ ಗುಜರಾತ್)
೧೧-೧೨ನೆ ಶತಮಾನದ ರಾಣಿ ಬಾವಿ (ರಾಣಿಕಾ ವಾವ್) ನಲ್ಲಿರುವ ಒಂದು ಮಹಿಷಮರ್ಧಿನಿಯ ಮೂರ್ತಿಯ ಕೆತ್ತನೆಯಲ್ಲಿಯು ಸಹ ಮಹಿಷಾಸುರನೆಂಬ ವ್ಯಕ್ತಿಯ ಚಿತ್ರಣವಾಗಿದೆ.
ಇವೆಲ್ಲವುದರ ನಡುವೆ ಪಲ್ಲವರ ೭ನೆ ಶತಮಾನದ ಒಂದು ಒಂದು ಕೆತ್ತನೆಯಲ್ಲಿ ಮಹಿಷಮರ್ಧಿನಿಯ ಚಿತ್ರಣವನ್ನು ಕೋಣದ ತಲೆಯುಳ್ಳವನೊಬ್ಬನ ಜೊತೆ ಯುದ್ಧದಲ್ಲಿ ತೊಡಗಿರುವಂತೆ ತೋರಲಾಗಿದ್ದು, ಇಲ್ಲಿ ಕೋಣ ಹಾಗು ಅದರ ಸವಾರರೆನ್ನಲಾಗುವ ಮಹಿಷಾಸುರನನ್ನು ಒಟ್ಟಿಗೆ ಕೆತ್ತಿಲ್ಲ. ಒಂದರ್ಥದಲ್ಲಿ ೧೧-೧೨ನೆ ಶತಮಾನದವರೆಗು, ಕೋಣ ಇಲ್ಲವೆ ಕೋಣದ ತಲೆಯವನ ಚಿತ್ರಣವೊಂದನ್ನು ಕೆತ್ತಲಾಗುತ್ತಿತ್ತೆ ಹೊರತು, ಕೋಣವನ್ನೊಂದು ಹಾಗು ಅದರ ಸವಾರ ಕೋಣಾಸುರ ಇಲ್ಲವೆ ಮಹಿಷಾಸುರರನ ಎರಡೂ ಚಿತ್ರಣಗಳನ್ನು ಕೆತ್ತಿತ್ತಿರಲಿಲ್ಲ.
ಬಹುಶಃ ೯-೧೦ನೆ ಶತಮಾನದ ನಡುವಿನಲ್ಲಿ ನಡೆದಿರಬಹುದಾದಂತಹ ಯಾವುದೋ ವಿದ್ಯುನ್ಮಾನದಿಂದಾಗಿ, ಈ ರೀತಿಯ ಬದಲಾವಣೆಗಳಾಗಿರುವ ಸಾಧ್ಯತೆಗಳಿವೆ.
೧೧-೧೨ನೆ ಶತಮಾನದಲ್ಲಿ ನಡೆದಿರಬಹುದು ಎನ್ನಲಾಗುವ, ‘ಕಾರುಗಳ್ಳಿ ಪಾಳೆಗಾರ’ ಹಾಗು ‘ಪಿರಿಯಾಪಟ್ಟಣ ಕಾಳಗ’ ಎಂಬ ಎರಡು ಜಾನಪದ ಕೃತಿಗಳು ಸಾಕ್ಷೀಕರಿಸುವ ಒಂದು ಘಟನೆ ಇದಕ್ಕೆಲ್ಲ ಕಾರಣವಿರಬಹುದಾ ಎಂಬ ಅನುಮಾನ ಮೂಡುತ್ತದೆ.
ವಯಸ್ಸಿನಲ್ಲಿ ಹೆಚ್ಚು ಹಿರಿಯನಾಗಿದ್ದರೂ ಸಹ ಮಾರಾನಾಯಕನು, ಹದಿನಾಡ ಅರಸನ ಮಗಳ ಮೇಲೆ ಆಸೆಪಟ್ಟು ವರಿಸಲು ಮುಂದಾಗುತ್ತಾನೆ. ಸ್ವತಃ ಇದು ಆಕೆಗೆ ಇಷ್ಟವಿಲ್ಲದ ಕಾರಣ, ಹದಿನಾಡ ಅರಸನು ಮಂಟೇಸ್ವಾಮಿಯ ಮೊರೆ ಹೋಗುತ್ತಾನೆ. ಬಲದಲ್ಲಿ, ಸೈನ್ಯದಲ್ಲಿ ಎಲ್ಲದರಲ್ಲೂ ಬಲಿಷ್ಠನಾದ ಮಾರಾನಾಯಕನನ್ನು ನೀನು ಎದುರುಹಾಕಿಕೊಂಡು ಗೆಲ್ಲಲಾಗದು. ಹಾಗೆಂದು ನಿನ್ನ ಮಗಳ ಇಷ್ಟಕ್ಕೆ ವಿರೋಧವಾಗಿ ಆಕೆಯನ್ನು ಮಾರಾನಾಯಕನೊಡನೆ ಮದುವೆಯನ್ನು ಮಾಡಿಸುವುದು ತಪ್ಪು ಎಂದ ಮಂಟೇಸ್ವಾಮಿಯು, ಇದಕ್ಕೊಂದು ತಂತ್ರ ರೂಪಿಸುತ್ತಾರೆ. ಮಾರಾನಾಯಕನ ಕಡೆಯವರನ್ನು ಒಬ್ಬೊಬ್ಬರನ್ನಾಗಿಯೇ ಬರಹೇಳಿ, ಒಬ್ಬೊಬ್ಬರನ್ನಾಗಿಯೆ ಹೊಡೆದು ಉರುಳಿಸುವುದು. ಇದರಂತೆ ನಡೆದು, ಮಾರಾನಾಯಕನ ಸೈನ್ಯವು ದುರ್ಬಲಗೊಂಡು, ಕುತಂತ್ರದ ರಣರಂಗದಲ್ಲಿ ಹದಿನಾಡ ಅರಸನ ಮಗಳ ಕೈಯಿಂದಲೇ ಮಾರಾನಾಯಕ ಹತ್ಯೆಯಾಯಿತು ಎಂಬ ಕಥೆಯೇ, ನಂತರದ ದಿನಗಳಲ್ಲಿ ಮಾರಾನಾಯಕನ ಪಾತ್ರವು ಮಹಿಷಾಸುರನ ಪಾತ್ರವಾಗಿ ರೂಪುಗೊಂಡಿತೆ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.
ಈ ಎರಡನ್ನೂ ಒಂದೇ ಎಂದುಕೊಂಡ ನಿಯೊ ಬುದ್ಧರು, ತಮ್ಮ ಸಿದ್ದಾಂತದ ಒಳಿತಿಗಾಗಿ, ತಮ್ಮ ಮತಾಂತರ ಗುರಿಗಾಗಿ, ಪ್ರಾಚೀನ ಸಮುದಾಯ ಒಂದರ ಇತಿಹಾಸವನ್ನೇ ತಿರುಚಿ ವಿರೂಪಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿರುವಂತಿದೆ.
ಮಹಿಷನು ಮಾತೃದೇವಿಯ ಬಂಟದೈವವೂ ಆಗಿರಬಲ್ಲ. ಇತಿಹಾಸದಲ್ಲಿ ಆಲುಪರ ರಾಜ ಬೂತರಾಜ ಪಾಂಡ್ಯನು ಮಹಿಷ ದೇವರ ಆರಾಧಕನಾಗಿದ್ದನು ಎಂಬುದನ್ನು ಶಾಸನಗಳು ದಾಖಲಿಸಿವೆ. ಬಹುಶಃ ಈ ಮಹಿಷ ಎಂದರೆ, ಮಾತೃದೇವತೆಯ ಬಂಟ ದೈವನೆ ಇರಬೇಕು.
ಮಹಿಷ (ಬಂಟ) ದೈವವನ್ನು ಪೂಜಿಸುವ ಸಂಸ್ಕೃತಿಯಂತು ಸದ್ಯಕ್ಕೆ ನಮ್ಮ ಸಮುದಾಯದಲ್ಲೆಲ್ಲೂ ಇಲ್ಲ. ಆದರೆ ಅದೇ ತೆರನಾದ ಬಂಟ ದೈವಗಳಾದ, ರಣ - ರಾವಣ - ದವಳೇಶ್ವರ ಪರಂಪರೆ (ಹಾಸನ, ಮಳವಳ್ಳಿ, ಕೋಲಾರ, ತುಮಕೂರು ಭಾಗಗಳಲ್ಲಿ), ಸಿಡೀರಣ್ಣ, ಕರಿಯಣ್ಣ, ಕೆಂಚಣ್ಣ, ಚಲುವರಾಯ, ಚನ್ನಿಗರಾಯ, (ಹಳೆ ಮೈಸೂರು ಪ್ರಾಂತ್ಯ) ಆರಾಧಿಸುವ ಪರಂಪರೆಗಳಿವೆ. ಹಾಗು ಅವು ಮನೆತನ, ಗ್ರಾಮಗಳ ಮಟ್ಟಿಗೆ ಪ್ರಚಲಿತದಲ್ಲಿದೆ.
Priest King Of Indus Valley Civilization
ಸಂಶೋಧನಾಕಾರರು ಹೇಳುವಂತೆ ಸಿಂಧೂ ನಾಗರೀಕತೆಯಲ್ಲಿ ಪ್ರಚಲಿತವಿದ್ದ ಪೂಜಾರಿ ಅರಸ (priestly king) ಸಂಸ್ಕೃತಿಯು ಇಂದಿಗೂ ಉಳಿದಿರುವುದು ಹೊಲಯ ಮಾದಿಗರಲ್ಲಿ. ಇವರಲ್ಲಿನ ಯಜಮಾನರುಗಳು ಇಲ್ಲವೆ ಕುಲಸ್ವಾಮಿಗಳು ಧಾರ್ಮಿಕ ಸಾಂಸ್ಕೃತಿಕ ವಿಚಾರಗಳಿಗು ಮುಖಂಡರು, ಹಾಗು ರಾಜತಾಂತ್ರಿಕ ವಿಚಾರಗಳಲ್ಲಿಯು ಮುಖಂಡರು. ಮದುವೆ ಸಮಾರಂಭಗಳಲ್ಲಿ ಪೌರೋಹಿತ್ಯ ಮಾಡುವವರು ಇವರೆ. ನ್ಯಾಯ ತೀರ್ಮಾನಗಳಲ್ಲಿ ಮುಂದಾಳತ್ವ ವಹಿಸುವವರು ಇವರೆ.
ಹೀಗೆ ಮಹಿಷನೆಂದು ಕರೆಸುಕೊಳ್ಳುವವ, ಬಲಿಯಾಗುವ ಕೋಣವನ್ನು ಸೂಚಿಸುವವನಲ್ಲ, ಬಲಿ ಪಡೆಯುವ ಮಾತೃದೇವಿಯ ಬಂಟ ಎಂಬುದನ್ನು ವಿಶೇಷವಾಗಿ ಏನು ವಿವರಿಸಬೇಕಿಲ್ಲ.
ಚಾಮುಂಡಿಯು ಮೂಲದಲ್ಲಿ ಒಂದು ಗ್ರಾಮದ ದೇವತೆ. ಬೆಟ್ಟದ ಮೇಲೆ ನೆಲೆಯಾಗಿದ್ದ ಗ್ರಾಮಸ್ಥರು ಪೂಜಿಸುತ್ತಿದ್ದ ಒಂದು ಊರಮ್ಮ. ಗಂಗರ ಕಾಲದಲ್ಲಿ ಈಕೆಯನ್ನು ಜೈನರು ಯಕ್ಷಿಣಿ ಎಂದು ಕರೆದಿರುವ ದಾಖಲೆ ಇದೆ. ಹೊಲಯರ ಒಳಕುಲಗಳಾದ ಚಂಡಾಳ್ವರು ಹಾಗು ಮುಂಡಾಳ್ವರ ಮಾತೃದೇವತೆ ಚಾಮುಂಡಿ. ಈಕೆಯ ಗುಡಿಯೊಂದು ಮಹಾಬಲ ಬೆಟ್ಟದ ಮೇಲಿತ್ತು ಎಂಬುದರ ಐತಿಹಾಸಿಕ ಉಲ್ಲೇಖಗಳನ್ನು ೬-೭ ಶತಮಾನದ ಆಸುಪಾಸಿನ ಶಾಸನ ಕಾವ್ಯ ಕೃತಿಗಳಲ್ಲಿ ಕಾಣಬಹುದ. ಅಸಲಿಗೆ ಈ ಮಹಾಬಲ ಬೆಟ್ಟ ಎಂದರೆ ಬೇರಾವುದು ಅಲ್ಲ, ಈಗಿನ ಚಾಮುಂಡಿ ಬೆಟ್ಟವೇ ಆಗಿದೆ. ಈ ದೇವಿಗೆ ತಂತ್ರಿಗಳು ಕಿವಿ ಹಾಗು ಮೂಗಿನ ಹರಕೆ ಅಪರ್ಸಿಸುತ್ತಿದ್ದುದರ ಬಗ್ಗೆಯು ಉಲ್ಲೇಖಗಳಿವೆ. ಇಲ್ಲಿಯು ತಾಂತ್ರಿಕ ಚಾಮುಂಡಿಗೆ ಕೋಣಬಲಿ ಅರ್ಪಿಸುತ್ತಿದ್ದುದರ ಬಗ್ಗೆಯು ಬಹಳಷ್ಟು ಪುರಾವೆಗಳು ದೊರಕುತ್ತವೆ.
ಹೊಲತಿಯೊಬ್ಬಳನ್ನು ನಾಡದೇವಿ ಎನ್ನುತ್ತಾರೆ.
ಹೊಲತಿಯೊಬ್ಬಳನ್ನು ಅಂಬಾರಿಯಲ್ಲಿ ಕೂರಿಸಿ ಲೋಕವೇ ಅವಳನ್ನು ಕೊಂಡಾಡುತ್ತದೆ.
ಹೊಲಯರಿಗೆ ದೊಡ್ಡದು ಎನ್ನಲಾಗುವ ಹಬ್ಬವನ್ನು ನಾಡಹಬ್ಬ ಎಂದು ಕರೆಯುತ್ತಾರೆ (ಮಾರರಿಗೆ ದೊಡ್ಡದು ಮಾರ್ಲಮಿ)
ಇದೆಲ್ಲ ನಮಗೆ, ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಷಯ. ಇದನ್ನು ವಿರೋಧಿಸುವ ಮುಟ್ಟಾಳ್ತನದ ಕೆಲಸವನ್ನು ನಾವ್ಯಾರೂ ಮಾಡುವುದಿಲ್ಲ.
ಮಾರ್ಲಮಿ ಹಬ್ಬದಂದು ಸತ್ತ ಹಿರಿಯರ ನೆನೆದು ಆರಾಧಿಸಿ, ನಂತರ, ಹುಣ್ಣುಮೆಯವರೆಗು ಹೊಲಯ ಮಾದಿಗರ ಶಾಕ್ತ ಪರಂಪರೆಯ ಏಳೂರಮ್ಮದಿರು, ಎಂದರೆ ಸಪ್ತಮಾತೃಕೆಯರ ಅರಾಧಿಸುವುದು ಹೊಲಯ ಮಾದಿಗರ ಸಂಸ್ಕೃತಿ. ಕೆಲವೆಡೆ ಮಾತೃದೇವತೆಗಳ ಜೊತೆಜೊತೆಗೆ ಅವರ ಬಂಟ ದೈವಗಳನ್ನು ಆರಾಧಿಸುವುದು ರೂಢಿ. ಇದೇ ನಮ್ಮ ಶಾಕ್ತ ಪರಂಪರೆಯ ಆಚರಣೆ.
ವಾಮಪಂಥೀಯ ನಿಯೊಬುದ್ಧ ಸಿದ್ದಾಂತದವರು ಕಟ್ಟುವ ಕಥೆಗಳಿಗೆ ತಲೆಬುಡವಿಲ್ಲ. ಆದಿಕರ್ನಾಟಕ ಆದಿದ್ರಾವಿಡರ ಪಶುಪಾಲನ ಸಂಸ್ಕೃತಿಯ ಕೋಣಕಾರಿಕೆಯನ್ನು, ಗೌಡ ದ್ರಾವಿಡ ಕವಲಿನವರಾದ ಯಾದವರೊಂದಿಗೆ ತಳುಕುಹಾಕಿ ಇತಿಹಾಸವನ್ನು ತಿರುಚುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಶಾಕ್ತ - ಆದಿಶೈವ - ಆದಿವೈಷ್ಣವ - ಜೈನ - ಬೌದ್ಧ ಮತಗಳಲ್ಲಿ common elementsನಂತೆ ಇರುವ ಆಚರಣೆಗಳ ಎಳೆಯನ್ನೇ ಹಿಡಿದು, ಆದಿಶೈವ - ಅಜೀವಿಕ - ಸಿದ್ದ ಪರಂಪರೆಯ ಮಲೆಮಹದೇಶ್ವರನನ್ನೂ ಬಿಡದೆ, ಆತನನ್ನು ಬೌದ್ಧ ಬಿಕ್ಕು ಎಂದು ಬೊಗಳೆ ಬಿಡುತ್ತಾರೆ.
ಸುಂಕವಸೂಲಿಕಾರನಾಗಿದ್ದ ಯಂಕು ಎಂಬ ಅಜೀವಿಕ ದೈವವು, ಈಗ ತಿಮ್ಮಪ್ಪನೆಂದೇ, ವೆಂಕಟೇಶನೆಂದೇ ಹೆಸರುವಾಸಿಯಾಗಿರುವನು. ಇವನನ್ನೂ ಬಿಡದೆ ಬಿಕ್ಕು ಎನ್ನುತ್ತಾರೆ.
ಪ್ರೊಫೆಸರ್ ಎನಿಸಿಕೊಂಡ ಕೆ. ಭಗವಾನರು, ಒಕ್ಕಲಿಗರ ಬಗೆಗಿನ ಇತಿಹಾಸ ದಾಖಲಿಸಿರುವ ‘ಭಾರತದ ಬೇಸಾಯಗಾರರೆಲ್ಲ ಬೌದ್ಧರು’ ಎಂಬ ಪುಸ್ತಕದಲ್ಲಿ, ಭಾಗಶಃ ಕೃಷಿ ಸಂಸ್ಕೃತಿಯ ಮೂಲದ ಹೊಲಯರ ಇತಿಹಾಸವನ್ನೇ ಒಕ್ಕಲಿಗರ ಇತಿಹಾಸವೆಂಬಂತೆ ಬಿಂಬಿಸಿ ಹೊಲಯರಿಗೆ ಮಾಡಿರುವ ಐತಿಹಾಸಿಕ ದ್ರೋಹವೇನು ಕಡಿಮೆಯೆ ?
ಭಾರತದಲ್ಲಿ ಅಲ್ಲೆಲ್ಲುಯಾ ಎಂದು ಬಡಬಡಾಯಿಸಿಕೊಂಡು ಕ್ರೈಸ್ತ ಮಿಷನರಿಗಳು ಮಾಡುತ್ತಿರುವ ಮತಾಂತರದ ರಾದ್ದಾಂತಗಳು, ಮೇರಿಯನ್ನು ಮೇರಿಯಮ್ಮ ಎಂದು, ಕ್ರೈಸ್ತನ ತಲೆ ಮೇಲೆ ಏಳು ಹೆಡೆಯ ಸರ್ಪ ಕೂರಿಸಿ, ಕ್ರಿಸ್ತನ ಕೊರಳಿಗೆ ರುದ್ರಾಕ್ಷಿ ಮಣಿ ಮಾಲೆ ತೊಡಿಸಿ ಮಾಡುವ ಹುಚ್ಚಾಟಗಳು ಒಂದೆಡೆಯಾದರೆ, ಈ ನಿಯೊಬುದ್ದರು ಕಂಡಕಂಡದ್ದನ್ನೆಲ್ಲಾ ನಿಯೊಬುದ್ಧ ಬಿಕ್ಕು ಅವರಿಗಿಂತ ದೊಡ್ಡ ಹುಚ್ಚಾಟವನ್ನು ಪ್ರದರ್ಶಿಸುತ್ತಿದ್ದಾರೆ.
ನಿರ್ಧಿಷ್ಟವಾಗಿ ಇವರಿಗೂ ನಮ್ಮ ಸಮುದಾಯಕ್ಕು ಯಾವುದೇ ರೀತಿಯ ಸಂಬಂಧವಿಲ್ಲ. ಅದೊಂದು ಸಿದ್ದಾಂತಕ್ಕೆ ನಿಷ್ಟವಾಗಿರುವ ಕೂಟ. ಅಲ್ಲಿ ಬೇರೆ ಬೇರೆ ಜಾತಿಯ ಜನರುಂಟು. ನಮ್ಮ ಸಮುದಾಯದ ಕೆಲ ದಾರಿ ತಪ್ಪಿದ ಯುವಕರು ಅಲ್ಲಿದ್ದ ಮಾತ್ರಕ್ಕೆ, ಇಡೀ ಸಮುದಾಯ ಸಿದ್ದಾಂತ ಅದಾಗುವುದಿಲ್ಲ. ನಮ್ಮ ಸಮುದಾಯದ ವಾರಸುದಾರಿಕೆ ಯಾವುದೇ ಪಕ್ಷದ, ಸಿದ್ದಾಂತದ, ತತ್ವದ ಹಿಡಿದಲ್ಲಿರುವುದಿಲ್ಲ. ಪಕ್ಷ, ತತ್ವ, ಸಿದ್ದಾಂತಗಳಿಗಿಂತ ಮಿಗಿಲಾದುದು ನಮ್ಮ ಸಮಾಜವಾಗಿದೆ.
ಪ್ರತಾಪ್ ಸಿಂಹರವರು ಇತಿಹಾಸ ತಿರುಚಿ ಒಂದು ನವ ಆಚರಣೆಯ ಮೂಲಕ ನಮ್ಮ ಸಮುದಾಯದ ಹಿನ್ನಲೆಯನ್ನೇ ತಿರುಚಲು ಹೊರಟಿದ್ದ ಕೆಲ ತಲೆಪುರುಕಿ ತಂಡವನ್ನು ಹತ್ತಿಕ್ಕಿದ್ದಕ್ಕೆ ಧನ್ಯವಾದಗಳನ್ನು ಹೇಳಬಯಸುವೆವು. ಈ ಉತ್ಸಾಹವು ನೆರೆಪೀಡಿತರಿಗೆ ಪರಿಹಾರ ತರುವುದರಲ್ಲಿಯೂ ತೋರಿ ಎಂದು ಕೇಳಿಕೊಳ್ಳುತ್ತೇವೆ.















