ಕಾಟೇರದ
ಹೊಲೆಮಾರಿ ಬಗ್ಗೆ ನಿಮಗೆಷ್ಟು ಗೊತ್ತು?
ನೆಲದ ಕಥೆಗಳು ಚಲನಚಿತ್ರವಾಗಿ
ಮೂಡಿಬರುತ್ತಿರುವ ಈ ದಿನಮಾನದಲ್ಲಿ ನೆಲದ ಸೊಗಡಿನ ಪದಗಳ ಅರ್ಥವನ್ನು ತಿಳಿಯುವುದು ತೀರಾ
ಅವಶ್ಯಕವೆನಿಸತ್ತೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದಲ್ಲಿ
ಅಂಥದ್ದೊಂದು ವಿಶೇಷತೆ ಇದೆ ಅನ್ನೋದೇ ಚಿತ್ರಕ್ಕೆ ಒಂದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರ
ಸೂಪರ್ ಹಿಟ್ ಆಗಿದೆ, ಪ್ರೇಕ್ಷಕರು ಚಿತ್ರವನ್ನು ಅಕ್ಷರಶಃ “ಆಚರಿಸುತ್ತಿದ್ದಾರೆ”, ಆದರೆ
ಪ್ರಾದೇಶಿಕ ಭಾಷಾ ಭಿನ್ನತೆ, ಆಚರಣೆಯ ವೈವಿಧ್ಯತೆ ಹಾಗೂ ವೈವಿಧ್ಯಮಯ ಪರಂಪರೆಗಳಿರುವ ಚಿತ್ರವಾದ
ಕಾರಣದಿಂದಾಗಿ ಚಿತ್ರಕ್ಕೆ ಅತಿದೊಡ್ಡ ಹೈಲೈಟ್ ಆದ “ಹೊಲೆಮಾರಿ” ಯ ಬಗ್ಗೆ ಬಹಳಷ್ಟು ಜನಕ್ಕೆ
ತಿಳಿದಿಲ್ಲ. ಅದನ್ನು ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ನಮ್ಮದು.
ಜಂಬೂದ್ವೀಪ (ಗ್ರೇಟರ್ ಇಂಡಿಯಾ)ದ ಕೃಷಿ
ಸಂಸ್ಕೃತಿಯಲ್ಲಿ ಕೋಣಗಳಿಗೆ ಬಹುಮುಖ್ಯ ಸ್ಥಾನವಿದೆ. ಈಗಲೂ ಆಗ್ನೇಯ ರಾಷ್ಟ್ರಗಳಲ್ಲಿನ ಬೇಸಾಯದ
ಉಳುಮೆ ಸಂಸ್ಕೃತಿಯಲ್ಲಿ ಕೋಣಗಳದ್ದೇ ಪಾರುಪತ್ಯ. ಅಲ್ಲಷ್ಟೇ ಅಲ್ಲದೇ ಈಗಲೂ ಕರ್ನಾಟಕದ ತುಳು
ಪ್ರದೇಶಗಳಲ್ಲಿ ಹಾಗೂ ಹಳೆಮೈಸೂರು ಭಾಗದ ಕೆಲವು ಕಡೆ ಉಳುಮೆಗೆ ಕೋಣಗಳೇ ಬಳಕೆಯಾಗ್ತವೆ.
ಕೇರಳದ ಕಾಡುಬುಡಕಟ್ಟ ಸಮುದಾಯವಾದ ಕಾಣಿಕರ ಜನಪದವೇನೋ
ಕೃಷಿ ಆವಿಷ್ಕರಿಸಿದ್ದು, ಹಾಗೂ ಅಡುಗೆ ಬೇಯಿಸುವುದನ್ನು ಆವಿಷ್ಕರಿಸಿದ್ದು ಪುಲಯ
ಹೆಂಗಸರು (ಹೊಲಯರ ಹೆಂಗಸರು) ಎಂಬುದನ್ನು ದಾಖಲಿಸಿವೆ. ಆದರೆ ಇದರ
ಸುತ್ತಲೂ ಯಾವುದೇ ಲೀಲೆಗಳ ಬಗ್ಗೆ ಕಥೆಗಳನ್ನು ಅವರು ಹೇಳುವುದಿಲ್ಲ. ಅವನ್ನು ನಾವು ಆಚರಣೆಗಳ
ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ಸತ್ತ ಹಿರಿಯರ ದೈವೀಕರಿಸಿ
ಆರಾಧಿಸುವುದು, ತಾಯಾಳಿಕೆಯು
(ಮಾತೃಮೂಲೀಯ/ಸ್ತ್ರೀಪ್ರಧಾನ ಸಂಸ್ಕೃತಿ) ಹಾಗೂ ಎಡೆಪೂಜೆ ಹೊಲಯ ಮಾದಿಗರ ಮೂಲ ಸಂಸ್ಕೃತಿಗಳಲ್ಲಿ
ಪ್ರಮುಖವಾದವು. ಬಹಳಷ್ಟು ಆಫ್ರಿಕನ್ ಭಾಷೆಗಳಲ್ಲಿ ಎಡೆ ಎಂದರ್ಥ ಕೊಡುವ ಪದಗಳು “ಹೊಲ್ಯ”
ಎಂದೇ ಇದೆ.
ಸತ್ತ ನಂತದರಲ್ಲಿ ದೈವತ್ವ ಪಡೆದ
ಕೃಷಿಕರ ಪೂರ್ವಜರು ಅಥವಾ ಕೃಷಿಗೆ ಸಂಬಂಧಿಸಿದ ದೈವಗಳಿಗೆ ಕೋಣಬಲಿ ಕೊಡುವುದು, ಅದರ ರಕ್ತವನ್ನು
ಸಂಪತ್ತಿನ ಸಂಕೇತವೆಂಬಂತೆ ಆಧರಿಸಿ ಗೌರವಿಸುವ ಸಂಪ್ರದಾಯದ ಹಿಂದೆ ಇರುವ “ಲೀಲೆ” ಯನ್ನು
ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.
ಆದಿ ಕೃಷಿಕರಾದ
ಹೊಲಯರು ಕಾಡು ಸವರಿ ಆನೆ
ಹಾಗೂ ಕಾಡುಹಂದಿಗಳ ಕೋರೆಗಳನ್ನು ಸಲಾಕೆಗಳಂತೆ ಬಳಸಿ ಕೃಷಿ ಪ್ರಾರಂಭಿಸಿ
ಬಿತ್ತಿ ಫಲವೇರುವ ಕಾಲಕ್ಕೆ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸುವುದು ಕಾಟಿ ಅಥವಾ ಕಾಡುಕೋಣಗಳೇ
ಆಗಿವೆ.
ಗ್ರೇಟರ್ ಇಂಡಿಯಾ, ಎಂದರೆ ಅಖಂಡ ಭಾರತದ
ಮಟ್ಟದಲ್ಲಿ ಈ ಕೃಷಿ-ಕೋಣ ಸಂಸ್ಕೃತಿಯನ್ನು ನಾವು ಗಮನಿಸಬಹುದು. ಇದರ ಕೇಂದ್ರಬಿಂದುವೆಂಬಂತೆ
ನಿಸ್ಸಂದೇಹವಾಗಿ ಗ್ರೇಟರ್
ಕರ್ನಾಟಕ (ವಿಂಧ್ಯ ಪರ್ವತ ಶ್ರೇಣಿ ಹಾಗೂ ಕಾವೇರಿ ಮೇಲುಕೊಳ್ಳ ನಡುವಣ ಸೀಮೆ) ಪ್ರಾಂತ್ಯವನ್ನು
ನಾವು ಪರಿಗಣಿಸಬಹುದು. ಏಕೆಂದರೆ ಈ ಕೋಣಬಲಿ ಹಾಗೂ ಹೊಲೆಮಾರಿ (ಕೋಣದ ರಕ್ತದ ಕೈ ಗುರುತು) ಅಥವಾ
ಚರಗ (ಕೋಣದ ರಕ್ತದಲ್ಲಿ ಕಲೆಸಿದ ಅನ್ನ) ಈ ಸಂಸ್ಕೃತಿ ಆಚರಣೆಗಳ ಹೆಜ್ಜೆ ಗುರುತುಗಳನ್ನು ನಾವು
ಸಿಂಧೂ ನಾಗರಿಕತೆಯಲ್ಲಿ ಹಾಗೂ ಮೇಲೆ ತಿಳಿಸಿದಲ್ಲೆಲ್ಲಾ ಯಥೇಚ್ಛವಾಗಿ ಕಾಣಬಹುದು.
ಪುಲಯನ್ ಹೆಂಗಸರು ಕೃಷಿಯನ್ನು ಆರಂಭಿಸಿ
ಕಾಟಿ/ಕಾಡುಕೋಣಗಳಿಂದ ಸಮಸ್ಯೆಯನ್ನು ಎದುರಿಸುವಂತದಾದಾಗ, ಆ ಕೃಷಿಕ ಹೆಂಗಸರ ದಂಡು ಅವುಗಳ
ಬೇಟೆಯಾಡಿ ತಿನ್ನುತ್ತಾರೆ. ಇನ್ನೂ ಕೆಲವು ಸಂದರ್ಭದಲ್ಲಿ ಬೇಟೆ ಕಾದಾಟದಲ್ಲಿ ಕೆಲವರು
ಸತ್ತಿರಲೂಬಹುದು. ಹೀಗೆ ಸತ್ತವರ ಮುಂದಿನ ಸಂತತಿಯು ಕಾಟಿ/ಕೋಣ ಹಿಡಿದು ಸತ್ತವರ ಆರಾಧನೆಗಳಲ್ಲಿ
ಬಲಿಹಾಕುವ ಆಚರಣೆ ಹುಟ್ಟಿಕೊಂಡಿತು. ಬರಿ ಇಷ್ಟಾದರೆ ಸಾಕೆ? ಕಾಟಿ/ಕೋಣಗಳ ಸಮಸ್ಯೆಗೆ ಒಂದು
ದೀರ್ಘಕಾಲದ ಪರಿಹಾರವಾದರೂ ಏನು? ಯಾವುದೇ ಪ್ರಾಣಿಗೆ ತನ್ನದೇ ಜಾತಿಯ ಪ್ರಾಣಿಯ ರಕ್ತವನ್ನು
ಕಂಡಾಗ, ಅಥವಾ ರಕ್ತದ ವಾಸನೆಯನ್ನು ಗ್ರಹಿಸಿದಾಗ ಅದಕ್ಕೆ ಒಗದಿಬರಬಹುದಾದಂತಹ ಆಪತ್ತನ್ನು ಅದು
ಅರ್ಥ ಮಾಡಿಕೊಳ್ಳಬಹುದು. ಕಸಾಯಿಖಾನೆಗಳಲ್ಲಿ, ಕೋಳಿ ಅಂಗಡಿಗಳಲ್ಲಿ ಅಲ್ಲಿರುವ ಜಾನುವಾರುಗಳ
ನಡವಳಿಕೆ ಗಮನಿಸಿದರೆ ಇದು ಚೆನ್ನಾಗಿ ತಿಳಿಯುತ್ತದೆ. ಕಾಟಿ/ಕೋಣ ಬಲಿಯಾದ ಮೇಲೆ ಅದರ ರಕ್ತವನ್ನು
ಶೇಖರಿಸಿ ಅದನ್ನು ಬಳಸಿ ಬೆಳೆವ ಹೊಲದ ಸುತ್ತಾ ಗಡಿ ಬರೆದರೆ ಅಲ್ಲಿಗೆ ಕಾಟಿ/ಕೋಣಗಳು
ಸುಳಿದಾಡುವುದಿಲ್ಲ ಎಂಬ ವಿಚಾರವು ಈ ಆದಿಕೃಷಿಕರಿಗೆ ಅರಿವಾಗಿರಬೇಕು. ತನ್ನದೇ ಜಾತಿಯ ಪ್ರಾಣಿಯ
ರಕ್ತವು ಅಪಾಯದ ಸೂಚನೆ ಎಂಬಂತೆಯೇ ಎಲ್ಲಾ ಪ್ರಾಣಿಗಳು ನಡೆದುಕೊಳ್ಳುವುದು ಪ್ರಾಣಿ ಸಹಜ
ಗುಣವಾಗಿದೆ. ಹೀಗೆ ಕಾಟಿ/ಕೋಣದ ರಕ್ತದಿಂದ ಗಡಿ ಬರೆದ ಹೊಲಗಳು ಅವುಗಳ ಕಾಣವಿಲ್ಲದೇ ಸಮೃದ್ಧವಾಗಿ
ಬೆಳೆದು ಸಂಪತ್ತನ್ನು ವೃದ್ಧಿಸುತ್ತದೆ. ಊರದೇವರ ಗುಡಿಯ ಗೋಡೆಯ ಮೇಲೆ ಕಾಟಿ/ಕೋಣದ ರಕ್ತದ ಕೈ
ಗುರುತು ಹಾಕುವುದು ಸಹ ಇಂಥದ್ದೇ ಪದ್ದತಿಯ ಒಂದು ಬಗೆ. ಇದೇ ಕಾಟೇರದಲ್ಲಿರುವ ಹೊಲೆಮಾರಿ.

ಇನ್ನೂ ಕೆಲವು ಕಡೆ ಈ ಆಚರಣೆಯಲ್ಲಿ
ಅನ್ನವನ್ನು ಆ ಕಾಟಿ/ಕೋಣದ ರಕ್ತದೊಂದಿಗೆ ಬೆರೆಸಿ ಅದನ್ನು ಬೆಳೆವ ಹೊಲಗಳಿಗೆ ಚೆಲ್ಲಲಾಗುತ್ತದೆ.
ಕಾಟಿ/ಕೋಣಗಳ ಕಾಟವಿಲ್ಲದೇ ಸಮೃದ್ಧವಾಗಿ ಬೆಳೆ ಬೆಳದು ಸಂಪತ್ತನ್ನು ಹೆಚ್ಚಿಸುತ್ತದೆ. ಈ
ರೀತಿಯಾಗಿ ಕೋಣದ ರಕ್ತ ಸಂಪತ್ತಿನ ಸೂಚಕವಾಗಿ ಮಾರ್ಪಟ್ಟು “ಹೊಲೆಮಾರಿ” (ಹೊಲೆ ಎಂದರೆ ನೆಲ,
ಮಣ್ಣು, ಹಾಗೂ ಹೆಚ್ಚು ಎಂದರ್ಥ, ಹಾಗೆಯೇ ಮಾರಿ ಎಂದರೂ ಸಹ ಹೆಚ್ಚು, ಸಮೃದ್ಧ ಎಂದೇ ಅರ್ಥವಿದೆ)
ಎನಿಸಿಕೊಂಡಿದೆ. ಕೆಲವು ಕಡೆ ಇದು ಚರಗ, ಎಂದರೆ ಕೋಣದ ರಕ್ತ ಹಾಗೂ ಅನ್ನ ಕಲಿಸಿಟ್ಟ ಬಿಂದಿಗೆ
(ಚರಗ-ಸಂಪತ್ತಿನ ಬಿಂದಿಗೆ) ಎನಿಸಿಕೊಂಡಿದೆ. ಒಂದರ್ಥದಲ್ಲಿ ಈ ಹೊಲೆಮಾರಿ/ಚರಗವು ಆದಿಮ ಕಾಲದ
ಕೃಷಿಕರಿಗೆ ಬೇಲಿಯಂತೆ ಅಥವಾ ಕೋಣದಿಂದ ಬೆಳೆಗಳನ್ನುಳಿಸುವ ಔಷದಿಯಂತೆ ಕಾಣಲಾಗಿದೆ.
ಹೊಲೆಮಾರಿ ಅಂದ್ರೆ…
ಹೊಲೆಮಾರಿ ಎಂದರೆ
ಆದಿಮ ಕೃಷಿಕರಾದ ಹೊಲಯರು ಪೂಜಿಸುತ್ತಿದ್ದ ಕೃಷಿ ಸಂಪತ್ತಿನ ದೇವತೆ ಎಂದೂ, ಹೊಲಯರ ಅಮ್ಮ ಎಂದೂ
ಅರ್ಥಗಳಿವೆ. ಹೊಲ್ಯ ಎಂದರೆ
ಮಲೆನಾಡು ಕನ್ನಡ ಹಾಗೂ ಕುಂದಗನ್ನಡಗಳಲ್ಲಿ ನೆಲ್ಲು
(ಭತ್ತ) ಎಂಬ
ಅರ್ಥವಿದೆ. ಇದಕ್ಕೆ ತಕ್ಕಂತೆ ಹೊಲಯರಲ್ಲಿ ಕೆಂಭತ್ತ ಅನ್ನೋ
ಒಂದು ಉಪಜಾತಿಯೂ ಉಂಟು. ಇವರು ಕೊಡಗು ಪ್ರಾಂತ್ಯವನ್ನು
ಕಟ್ಟಿದ ಮೊದಲಿಗರು. ಕಾವೇರಿ ನದಿಗಿರುವ ಜಾನಪದ ಕಥೆಯ ಪ್ರಕಾರ ಪೊನ್ನಿ ಎಂಬ
ಹೊಲಯರ ಹೆಣ್ಣು ವಲ್ಲುವ ಜಾತಿಯ ಅಗಸ್ತ್ಯನನ್ನು
ಮದುವೆಯಾದವಳು. ಇವಳ ಹೆಸರನ್ನೇ (ಪೊನ್ನಿ) ತಮಿಳರು ಕಾವೇರಿ ನದಿಗೂ
ಹೆಸರಿಸಿದ್ದಾರೆ.
ಹಾಗೆಯೇ ಹೊಲೆದೇವರು ಎಂದು
ಕರೆಸಿಕೊಳ್ಳುವ ”ಭತ್ತ
ತುಂಬ ಕಣಜ ಹಾಗೂ ಆ ಕಣಜದ ಮೇಲಿಟ್ಟ ನೆಲಕ್ಕೆ ತಾಗದಂತೆ ಕಿತ್ತ ಎಳನೀರು”
ಸಹ ಕೃಷಿಕ ದೈವದ ಹೆಸರನ್ನೇ ಸೂಚಿಸತ್ತದೆ. “ತಲಬಾಗಿಲಲ್ಲಿ ಹೊಲೆದೇವರು” ಅನ್ನೋ ಒಂದು
ಗಾದೆ/ನಾಣ್ನುಡಿಯನ್ನು ನೆನೆಯಲು ಸೂಕ್ತ ಸಮಯವಿದು. ಹಳೆಮೈಸೂರು ಭಾಗದ
ಹಲವು ಮನೆಗಳಲ್ಲಿ, ಮನೆಯ ಒಳಗೆ ಮುಖ್ಯದ್ವಾರದ ಮೇಲೆ ನೆಲಕ್ಕೆ ತಾಗದ ಎಳನೀರನ್ನಾಗಲಿ,
ತೆಂಗಿನಕಾಯನ್ನಾಗಲಿ ಕಟ್ಟುವ ಸಾಂಸ್ಕೃತಿಕ ರೂಢಿ ಇದೆ. ಇದನ್ನೇ ಹೊಲೆದೇವರೆನ್ನುವುದು. ಈ
ಹೊಲೆದೇವರುಗಳೇ ಹೊಲಯರ ಮೂಲ ಎಂದು, ಹೊಲಯರ ಮೂಲಪುರುಷನೆಂದು ಜನಪದ
ವಿದ್ವಾಂಸರು ಪರಿಗಣಿಸಿತ್ತಾರೆ.
ಹೊಲೆಮಾರಿ/ಚರಗ ಪೈಪೋಟಿಯಲ್ಲಿ
ಹೊತ್ತೊಯ್ಯುವ ಸಂಪ್ರದಾಯ
ಹೊಲೆಮಾರಿ/ಚರಗಕ್ಕೂ ಬೇಸಾಯದಲ್ಲಿನ
ಸಮೃದ್ದಿಗೂ ಇರುವ ನೇರವಾದ ಸಂಬಂಭವನ್ನ ಮೇಲಿನ ಬರವಣಿಗೆಯಲ್ಲಿ ತಿಳಿಸಿಕೊಡಲಾಗಿದೆ. ಆದರೆ ಇದನ್ನು
ಪೈಪೋಟಿಯಲ್ಲಿ ಹೊತ್ತೊಯ್ಯುವ ಸಂಪ್ರದಾಯ ಹುಟ್ಟಿಕೊಂಡದ್ದಾದರೂ ಹೇಗೆ? ಅನ್ನೋ ಪ್ರಶ್ನೆಗೆ ಉತ್ತರ
ಹುಡುಕುವ ಒಂದು ಸಣ್ಣ ಪ್ರಯತ್ನ ನಮ್ಮದು. ಕಾಟಿಯನ್ನು ಪಳಗಿಸಿ ಅದನ್ನು ಜಾನುವಾರಾಗಿ
ಸಾಕುಪ್ರಾಣಿಯಾಗಿ ಪಶುಪಾಲನೆ ಮಾಡುವ ನಾಗರೀಕತೆಯ ಹಂತಕ್ಕೂ ಮೊದಲು, ಆರಂಬದ ದೇವತೆಗಳಿಗೆ (ಎಂದರೆ
ಕೃಷಿಗೆ ಸಂಬಂಧಿಸಿದ ದೇವತೆಗಳಿಗೆ) ಬಲಿ ನೀಡಲೆಂದು ಕಾಡಿನಿಂದ ಕಾಟಿ/ಕೋಣಗಳನ್ನು ಹಿಡಿದು
ತರುವುದೇ ಒಂದು ದೊಡ್ಡ ಸಾಹಸವೆಂಬಂತಿದ್ದ ಕಾಲದಲ್ಲಿ ಒಂದು ಬೀಡಿನ (ಊರಿನ) ಆದಿ ಕೃಷಿಕರಾಗಿದ್ದ
ಹೊಲಯರು/ಮಾದಿಗರು ಬಲಿಪಶುವಿಗೆ ಯಾವುದೇ ಗಾಯಗಳು, ಊನುಗಳು ಆಗದಂತೆ ಕಾಟಿ/ಕೋಣದೊಡನೆ ಕಾದಾಡಿ
ಅವನ್ನು ಹಿಡಿದು ತರಬೇಕಿತ್ತು. ಒಂದು ಬೀಡಿನವರು ಯಶಸ್ವಿಯಾಗಿ ತಂದು ಬಲಿಗೆ ಸಿದ್ದಪಡಿಸಿದರೆ,
ಮತ್ತೊಂದು ಬೀಡಿನವರು ತಮ್ಮ ಊರಿನ ಬಲಿಗೆ ಕಾಟಿ/ಕೋಣವನ್ನು ತರಲಾಗದಿದ್ದರೆ ಈ ಒಂದು ಬೀಡಿನ
ಹೊಲೆಮಾರಿ/ಚರಗವನ್ನು ಮತ್ತೊಂದು ಬೀಡಿನವರು ಹೊತ್ತೊಯ್ಯುವ ಪೈಪೋಟಿ ಏರ್ಪಡುತ್ತಿತ್ತು. ಏಕೆಂದರೆ
ಕಾಟಿ/ಕೋಣಗಳ ಉಪಟಳವಿಲ್ಲದೆ ಸಮೃದ್ಧವಾಗಿ ಬೆಳೆ ಬೆಳೆಯಲು ಹೊಲೆಮಾರಿ/ಚರಗ ಆಗ
ಅತ್ಯಾವಶ್ಯಕವಾಗಿತ್ತಲ್ಲ?
ಕಾಕತಾಳೀಯವೆಂಬಂತೆ ಒಂದು ಘಟನೆ ಈ ಸಮಯಕ್ಕೆ
ಸೂಕ್ತವೆನಿಸುವಂತ ಒಂದು ವಿಚಾರ ನೆನಪಾಯ್ತು, ರಸಗೊಬ್ಬರದ ವಿಚಾರವಾಗಿ ಕರ್ನಾಟಕದಲ್ಲಿಯೇ ಪ್ರತಿಭಟೆಯಾಗಿ
ರೈತರ ಮೇಲೆ ಗೋಲಿಬಾರ್ ಆದದ್ದು ಉಂಟಲ್ಲವೆ?
ಹೀಗೆ ಹೊಲೆಮಾರಿ/ಚರಗವನ್ನು, ಬಲಿಗೆ
ಕಾಟಿ/ಕೋಣ ಸಿಗದ ಬೀಡಿನವರು ಹೊತ್ತೊಯ್ಯುವ ಸಂಪ್ರದಾಯ ಹುಟ್ಟಿಕೊಂಡಿತು. ಆದರೆ
ಕಾಟಿಗಳ ಪಳಗಿಸಿ ಅವನ್ನು ಕೋಣಗಳಾಗಿ ಸಾಕಣಿಕೆಯ ಪ್ರಾಣಿಗಳನ್ನಾಗಿ ಪರಿವರ್ತಿಸಿಕೊಂಡಮೇಲೆ ಈ
ಸಂಪ್ರದಾಯ ಹಲವು ಕಡೆ ನಿಂತುಹೋಗಿರುತ್ತದೆ, ಹಾಗೂ ಕೆಲವು ಕಡೆ ಮಾತ್ರ ಉಳಿದಿರುತ್ತದೆ. ಬಹುಶಃ
ಈ ಸಂಪ್ರದಾಯ ಹಂಪಿ ಸುತ್ತಮುತ್ತಲಿನ ಪರಿಸರದಲ್ಲಿ ಇದ್ದಿರಬಹುದು, ಏಕೆಂದರೆ ಚಿತ್ರಕಥೆ ಬರೆದ
ಜಡೇಶರವರು ಅದೇ ಸೀಮೆಯವರಾಗಿದ್ದಾರೆ.
ನೆಲೆ ಸಂಸ್ಕೃತಿಗೂ ಬೇಕಿತ್ತು ಈ ಹಲೆಮಾರಿ/ಚರಗ!
ನೆಲೆ ಸಂಸ್ಕೃತಿ,
ಎಂದರೆ ಒಂದು ಊರು ಕಟ್ಟಿ ಅದನ್ನು ಕಾಟಿಗಳಂತಹ ಪ್ರಾಣಿಗಳಿಂದ ಉಂಟಾಗುವ ಕೆಡುಕಿನಿಂದ ರಕ್ಷಿಸಿಕೊಳ್ಳಲು
ಸಹ ಹೊಲೆಮಾರಿ/ಚರಗ ಬೇಕಿತ್ತು. ಇದೇ ಕಾರಣಕ್ಕೆ ಹೊಲಯರ ಪಳ್ಳಿ/ಸಂಸ್ಕೃತಿಯಲ್ಲಿ ಒಂದು ಊರು/ಹಳ್ಳಿ
ಸ್ಥಾಪಿಸುವಾಗ ಅದರ ಆಯಕ್ಕೆ ಕೋಣವನ್ನಾಗಲಿ ಕಾಡುಹಂದಿಯನ್ನಾಗಲಿ (ಆ ಪ್ರಾಂತ್ಯದಲ್ಲಿ ಉಪಟಳವನ್ನುಂಟು
ಮಾಡುವ ಪ್ರಾಣಿಗಳು) ಬಲಿ ಕೊಟ್ಟು ಅದರ ರಕ್ತದಿಂದ ಹೊಲೆಮಾರಿ/ಚರಗ ಮಾಡಿ ಗಡಿ ಗುರುತಿಸಿ ಅಲ್ಲಿ ಆಯಾ
ಪ್ರಾಣಿಗಳು ಸಮಸ್ಯೆ ಉಂಟುಮಾಡದಂತೆ ಅದನ್ನು "ರಕ್ಷಣೆಯ ತಂತ್ರ"ವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು.
ಹೀಗೆ ಆದಿಮರೂ ಆದ, ಆದಿ ಕೃಷಿಕರೂ ಆದ, ಊರು/ಪಳ್ಳಿ/ಹಳ್ಳಿ ಎಂಬ ನೆಲೆ ಸಂಸ್ಕೃತಿಯ ಕಟ್ಟಿದ ಹೊಲಯ ಮಾದಿಗರ
ಸಂಸ್ಕೃತಿಯಲ್ಲಿ ನೆಲೆವೀಡಿಗೂ, ಬೆಳೆವ ಹೊಲಕ್ಕೂ ಹೊಲೆಮಾರಿ/ಚರಗ ಎಂಬುದು ಒಂದು ಅತ್ಯಾವಶ್ಯಕ ಅಂಶವಾಗಿ
ಬೆಸೆದುಕೊಂಡಿತು.
ಇತಿಹಾಸದಲ್ಲಿ ಹೊಲೆಮಾರಿ/ಚರಗದ ಕುರುಹುಗಳುಂಟೆ?
ಹೊಲೆಮಾರಿ ಚರಗಗಳ ಬಗ್ಗೆ ಇತಿಹಾಸ ಹಾಗೂ
ಜಾನಪದೀಯ ಆಚರಣೆಯಲ್ಲಿ ಹೆಚ್ಚೆಚ್ಚು ಕುರುಹುಗಳಿವೆ. ಕರ್ನಾಟ ರಾಯರ
(ವಿಜಯನಗರ ಸಂಸ್ಥಾನ) ಆಳ್ವಿಕೆಯಲ್ಲಿಯೇ
ಮಹಾನವಮಿ ಹಬ್ಬದಂದು ನಾಲ್ಕು ಸಾವಿರಕ್ಕೂ ಹೆಚ್ಚು ಕೋಣಗಳ ಬಲಿಯಾಗುತ್ತಿದ್ದರೆ ಬಗ್ಗೆ ಐತಿಹಾಸಿಕ
ದಾಖಲೆಗಳಿವೆ. ಎಂದರೆ ಒಂದು ಬೀಡು ದೊಡ್ಡದಾಗಿ ಬೆಳೆಯುತ್ತಾ ಹೋದಂತೆಲ್ಲಾ, ಅದರ ವ್ಯಾಪ್ತಿ
ಹೆಚ್ಚಾದಂತೆಲ್ಲಾ ಅಲ್ಲಿಗೆ ಬೇಕಾದ ಹೊಲೆಮಾರಿ/ಚರಗದ ಪ್ರಮಾಣ ಹೆಚ್ಚಾಗಿ ಅಲ್ಲಿ ಬಲಿಯಾಗುವ ಕೋಣಗಳ
ಸಂಖ್ಯೆಯೂ ಹೆಚ್ಚುತ್ತಿತ್ತು. ಈಗಲೇ ಮಲೆನಾಡು ಅರೆಮಲೆನಾಡು ಬಯಲುಕಾಡುಗಳ ಅಂಚಿನ ಊರುಗಳಲ್ಲಿ
ಅವಕ್ಕೆ ಹೊಂದಿಕೊಂಡಿರುವಂತಹ ಬೆಳೆವ ಹೊಲಗಳಿಗೆ ಸಾಕಷ್ಟು ಕಾಟಿಗಳು ಕಾಟ ಕೊಡುವುದನ್ನ, ಮೇಯ್ದು
ಹೋಗುವ ಸುದ್ದಿಗಳನ್ನ ದಿನಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಇನ್ನೂ 600-700 ವರ್ಷಗಳ
ಹಿಂದೆ ಹಂಪಿಯಲ್ಲಿ, ಸಾವಿರಾರು ವರ್ಷಗಳ ಹಿಂದೆ ಆರಂಬಗಾರರ ಪರಿಸ್ಥಿತಿ ಹೇಗಿದ್ದಿರಬಹುದು
ಎಂಬುದನ್ನು ಅಂದಾಜಿಸಿಕೊಳ್ಳಿ! ಈಗಲೂ ಕರ್ನಾಟಕ ಜಾನಪದ ಹಾಗೂ ಕೃಷಿ ಸಂಸ್ಕೃತಿಯಲ್ಲಿ
ಹೊಲೆಮಾರಿ/ಚರಗವು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕರ್ನಾಟಕದ ಹಲವು ಊರಮ್ಮನ
ಗುಡಿ/ಮಾರಿ ಗುಡಿಯಲ್ಲಿ ಗುಪ್ತ ಆಚರಣೆಯಾಗಿ ನಡೆಯುವ ಕೋಣಬಲಿಗಳು ಇಂಥದ್ದೇ ನಂಬಿಕೆ ಆಚಾರಗಳನುಸಾರ
ನಡೆಯುತ್ತಿವೆ.
ಸಂಸ್ಕೃತಿ-ಸ್ಥಾನಪಲ್ಲಟಗಳು
ಇದೆಲ್ಲಾ ಹೊಲಯ ಮಾದಿಗರ ಆದಿಮ ಕೃಷಿಕ
ಸಂಸ್ಕೃತಿಯಿಂದ ಮೂಡಿದ ಸಂಪ್ರದಾಯಾಚರಣೆಗಳಾದರೂ ಸಹ ಹಕ್ಕು ಅಧಿಕಾರಗಳಿಂದ ವಂಚಿತರಾಗಿ ಸಮಾಜದ
ಕೆಳಸ್ತರಕ್ಕೆ ಬಿದ್ದು ಸಣ್ಣಪುಟ್ಟ ಭೂಹಿಡುವಳಿದಾರರಾಗಿ, ಊಳಿಗಮಾನ್ಯ ನವಕ್ಷತ್ರಿಯ ಸಮುದಾಯಗಳ ಕೈ
ಕೆಳಗೆ ಸಿಕ್ಕಿಹಾಕಿಕೊಂಡಂತಿರುವ ಈ ಜನರು, ಈಗ ಕೇವಲ ಆಚರಣೆಗಳಲ್ಲಿ ಭಾಗವಹಿಸುವುದಕ್ಕೆ
ಸೀಮಿತವಾಗಿಬಿಟ್ಟಿದ್ದಾರೆ. ಚರಗವನ್ನು ಊರಿನ ಗಡಿಗೆಲ್ಲಾ ಸುರಿದು ಗಡಿ ಗುರುತಿಸುವುದು, ಅಥವ
ಪೈಪೋಟಿಯಲ್ಲಿ ಮತ್ತೊಂದು ಊರಿನಿಂದ ಹೊಲೆಮಾರಿಯನ್ನು ಹೊತ್ತುತರುವುದು ಹೊಲಯ ಇಲ್ಲವೇ ಮಾದಿಗರ
ಪೈಕಿಯ ಬಲಿಷ್ಠ ಯುವಕರ ಜವಬ್ದಾರಿಯಾಗಿರುತ್ತದೆ. ಇನ್ನೂ ಕೆಲವು ಬಾರಿ ತಮ್ಮ ವಿರುದ್ಧ
ಬಂಡಾಯವೆದ್ದ ಹೊಲಯ/ಮಾದಿಗರ ಯುವಕರನ್ನೇ ಹೊಲೆಮಾರಿ ತರಲು ಊಳಿಗಮಾನ್ಯ ನವಕ್ಷತ್ರಿಯ ಮುಂದಾಳುಗಳು
ಗುರಿಯಾಗಿಸುತ್ತಿದ್ದರು. ಕಾಟೇರ ಚಿತ್ರದಲ್ಲೇ ಇರುವಂತೆ ಇದು ಕಳೆದ ದಶಕಗಳಲ್ಲಿ ಹೊಲಯ
ಮಾದಿಗರನ್ನು ಶೋಷಿಸುವ ಅಸ್ತ್ರವೂ ಆಗಿತ್ತು ಎಂಬುದನ್ನು ನಂಬುವಿರಾ? ತುಮಕೂರಿನಲ್ಲಿ ಇಂಥದ್ದೊಂದು
ಪ್ರಕರಣವಾಗಿತ್ತು. ಚೂರುಪಾರು ಓದಿಕೊಂಡು ಅಕ್ಷರ ಕಲಿತ ಆದಿಜಾಂಬವ/ಮಾದಿಗರ ಯುವಕ, ಇದೆಲ್ಲಾ
ಮೌಡ್ಯ, ಹೀಗೆ ಮಾಡಬಾರದು ಎಂದು ಚರಗವನ್ನು ಹೊತ್ತು ಗಡಿ ಗುರುತಿಸಿ ಚರಗ ಸುರಿಯಲು, ಹಾಗೂ ಬೆಳೆವ
ಹೊಲಗಳಿಗೆ ಚರಗ ಚೆಲ್ಲವು ಒಪ್ಪದೇ ಇದ್ದಾಗ ಆತನ ಮೇಲೆ ಊರಿನ ಮುಂದುವರೆದ ಜಾತಿಗಳು ದೌರ್ಜನ್ಯ
ನಡೆಸಿದ್ದರು. ಇಂಥದ್ದೇ ಘಟನೆಗಳು ರಾಯಲಸೀಮೆಗೆ ಹೊಂದಿಕೊಂಡಂತಿರುವ ಪೂರ್ವ ಕರ್ನಾಟಕದಲ್ಲಿ
ಬಹಳಷ್ಟು ಘಟಿಸಿಹೋಗಿವೆ, ಹಾಗೂ ಈಗ ಕಡಿಮೆಯೂ ಆಗಿದೆ.
ಇನ್ನೂ ಸಾಂಸ್ಕೃತಿಕ ಸ್ಥಾನಪಲ್ಲಟಗಳ
ವಿಚಾರಕ್ಕೆ ಬಂದರೆ ಇದೇ ಕೋಣಬಲಿಯ ವೃತ್ತಾಂತವನ್ನು ಹೊಲಯ ಮಾದಿಗರು ಭೂಹಿಡುವಳಿಯ ಅಧಿಕಾರವನ್ನು
12-13ನೇ ಶತಮಾನದ ನಂತರದಲ್ಲಿ ಊಳಿಗಮಾನ್ಯ ಜಮೀನ್ದಾರಿಕೆಯ ಪದ್ದತಿಗೆ ಕಳೆದುಕೊಂಡದರ ಸೂಚಕವಾಗಿ
ಸ್ವತಃ ಬಲಿಪಶುವನ್ನೇ ಮಾದಿಗರನ್ನಾಗಿಸಿ, ಕೀಳೆಂಬಂತೆ ಬಿಂಬಿಸುವ ಕಥೆಗಳನ್ನು ಹೆಣೆದು
ಹಂಚಲಾಯಿತು. ಇನ್ನೂ ಕಾಟಿಗಳನ್ನು ಕೊಂದ ಪುಲಯನ್ ಕೃಷಿಕ ಹೆಂಗಸರ (ಆದಿಮ ಕೃಷಿಕ ಹೊಲಯ ಹೆಂಗಸರ)
ಪ್ರಸಂಗವೇ ಮುಂದೆ ವೈದಿಕ ಪರಂಪರೆಯಲ್ಲಿ ಮಹಿಷಾಸುರ ಮರ್ಧಿನಿ ಕಥೆಯ ಹುಟ್ಟಿಗೆ ಕಾರಣವಾದಂತಿದೆ. ಈ
ಹಬ್ಬ ಆಚರಣೆಯಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆ ಪಡೆದುಕೊಂಡಿರುವವರು ಆದಿ ಜಾಂಬವರು, ಮಾದಿಗರು,
ಹೊಲಯರು ಹಾಗೂ ತೊಗಟವೀರರು (ಬೇಡರು) ಆದರೂ ಸಹ ಉಳಿದೆಲ್ಲಾ ಜಾತಿಯ ಜನರು ಸೇರಿ ಮಾಡುವ ಹಬ್ಬ
ಇದಾಗಿದ್ದು ಅಧಿಕಾರಸ್ತರು ಮಾತ್ರ ಊಳಿಗಮಾನ್ಯ ನವಕ್ಷತ್ರಿಯ ಸಮುದಾಯಗಳಾಗಿವೆ.
ಆಂಧ್ರ ಸೀಮೆಯಲ್ಲಿ ಇನ್ನೂ ಇದ್ದಾಳೆ
ಕೃಷಿ ಸಂಪತ್ತಿನ ದೇವತೆ ಹೊಲೆಮಾರಿ
ಕನ್ನಡದ ಹೊಲೆಮಾರಿ ಹಳೆಗನ್ನಡದಲ್ಲಿ
“ಪೊಲೇರಮ್ಮ” ಎಂದರೆ ಹೊಲಯರ ಅಮ್ಮ, ಈ ಪೊಲೇರಮ್ಮ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಬೇರೆ ಬೇರೆ
ಹೆಸರುಗಳ ಮೂಲಕ ರೂಪಾಂತರಗೊಂಡಿದ್ದಾಳೆ. ಆದರೆ ಆಂಧ್ರ ಸೀಮೆಯಲ್ಲಿ ಪೊಲೇರಮ್ಮ ಆಗೇ ಉಳಿದಿದ್ದಾಳೆ.
ಸಪ್ತಮಾತೃಕೆಯರ ಪೈಕಿ ಇವಳು ಮೊದಲನೆಯವಳು. ಬ್ರಾಹ್ಮಣಿ ಎಂಬದು ಇವಳ ಸಂಸ್ಕೃತಕರಣ ಹೆಸರು, ಇದರರ್ಥ
ಮೊದಲನೆಯವಳು, ಆದಿಮಳು ಎಂದು. ಕಣಿ ಹೇಳುವ ಕೊರವರ ಬಿದಿರು ಬುಟ್ಟಿಯೊಳಗೆ ಪೊಲೇರಮ್ಮನನ್ನು
ಆರಾಧಿಸುತ್ತಾರೆ, ಅವಳೇ ಆ ಕಣಿಯವರ ಬಾಯಲ್ಲಿ ಭವಿಷ್ಯ ನುಡಿಸುವುದು ಎಂಬ ನಂಬಿಕೆ ಕಣಿಯವರಲ್ಲಿದೆ.